ಇಂದಿನಿಂದ ಡಿಆರ್‍ಸಿ ಮಲ್ಟಿಫ್ಲೆಕ್ಸ್‍ನಲ್ಲಿ ದಸರಾ ವಿಶೇಷ ಚಿತ್ರ ಪ್ರದರ್ಶನ

ಮೈಸೂರು, ಅ.22(ಪಿಎಂ)- ಬೆಳ್ಳಿತೆರೆ ತೆರೆಯಲು ಅವಕಾಶ ಸಿಕ್ಕರೂ ಮೈಸೂರಿನ ಚಿತ್ರಮಂದಿರಗಳು ಸಿನಿಮಾ ಪ್ರದರ್ಶನಕ್ಕೆ ಮುಂದಾಗಿಲ್ಲ. ಒಟ್ಟು ಆಸನ ಸಾಮಥ್ರ್ಯದ ಶೇ.50ರಷ್ಟು ಮಂದಿಗೆ ಮಾತ್ರ ಅವಕಾಶ ನೀಡಿ ತೆರೆಯಲು ಸರ್ಕಾರ ಷರತ್ತು ವಿಧಿಸಿರುವ ಹಿನ್ನೆಲೆಯಲ್ಲಿ ನಷ್ಟದ ಆತಂಕದಲ್ಲಿ ಬೆಳ್ಳಿತೆರೆ ತೆರೆದಿಲ್ಲ.

ಈ ನಡುವೆ ಮೈಸೂರಿನ ಜಯಲಕ್ಷ್ಮೀಪುರಂನ ಡಿಆರ್‍ಸಿ ಮಲ್ಟಿಫ್ಲೆಕ್ಸ್ ಚಿತ್ರಮಂದಿರ ಅ.15ರಿಂದ ಪ್ರದರ್ಶನಕ್ಕೆ ತೆರೆದು ಕೊಂಡಿದೆ. ಜೊತೆಗೆ ಮೈಸೂರು ದಸರಾ ಮಹೋತ್ಸವ ಅಂಗ ವಾಗಿ ವಿಶೇಷ ಸಿನಿಮಾ ಪ್ರದರ್ಶನ ಏರ್ಪಡಿಸಿ ಮೈಸೂರಿಗರು ಹಾಗೂ ದಸರಾ ಹಿನ್ನೆಲೆಯಲ್ಲಿ ಭೇಟಿ ನೀಡಿರುವ ಪ್ರವಾಸಿಗರಿಗೆ ಮನರಂಜನೆ ನೀಡಲು ಮುಂದಾಗಿದೆ.

ಸರ್ಕಾರದ ಕೋವಿಡ್ ಮಾರ್ಗಸೂಚಿ ಅನ್ವಯ ಎಲ್ಲಾ ಮುನ್ನೆಚ್ಚರಿಕಾ ಕ್ರಮದೊಂದಿಗೆ ಪ್ರದರ್ಶನಕ್ಕೆ ತೆರೆದುಕೊಂಡಿರುವ ಡಿಆರ್‍ಸಿ ಮಲ್ಟಿಫ್ಲೆಕ್ಸ್ ಚಿತ್ರಮಂದಿರ, ಅ.23ರಿಂದ 29ರವರೆಗೆ ಈ ವಿಶೇಷ ಪ್ರದರ್ಶನ ಹಮ್ಮಿಕೊಂಡಿದೆ.

ಚಿತ್ರಮಂದಿರ ತೆರೆಯಲು ಸರ್ಕಾರ ಅವಕಾಶ ನೀಡುತ್ತಿದ್ದಂತೆ ಕಾರ್ಯಾರಂಭ ಮಾಡಿರುವ ಡಿಆರ್‍ಸಿ ಚಿತ್ರಮಂದಿರ ಪ್ರೇಕ್ಷಕರ ಪ್ರತಿಕ್ರಿಯೆ ಪಡೆಯಲೂ ಆದ್ಯತೆ ನೀಡಿತ್ತು. ಇದಕ್ಕಾಗಿ ಫೇಸ್‍ಬುಕ್ ಮೂಲಕ ಪ್ರೇಕ್ಷಕರ ಸಂಪರ್ಕ ಸಾಧಿಸಿ ಅವರ ಅಭಿಪ್ರಾಯ ಪಡೆದು ಪ್ರೇಕ್ಷಕ ಸ್ನೇಹಿಯಾಗಿ ಪ್ರದರ್ಶನ ಮುಂದುವರೆಸಿದೆ.

ಇಲ್ಲಿನ ನಾಲ್ಕು ಸ್ಕ್ರೀನ್‍ಗಳಲ್ಲಿ ದಸರಾ ಉತ್ಸವದ ಅಂಗವಾಗಿ ವಿಶೇಷ ಚಿತ್ರ ಪ್ರದರ್ಶನ ನಾಳೆ ತೆರೆದುಕೊಳ್ಳಲಿದೆ. ಆ ಮೂಲಕ ವಾರ ಕಾಲ ವೈವಿಧ್ಯಮಯ ಚಿತ್ರಗಳನ್ನು ಕಲೆ ಹಾಕಿ ಪ್ರೇಕ್ಷಕರ ಮನ ತಣಿಸಲು ಮುಂದಾಗಿದೆ. ಬೆಳಿಗ್ಗೆ 11 ಹಾಗೂ ರಾತ್ರಿ 8ಕ್ಕೆ ಕೋಟಿಗೊಬ್ಬ 2 (ಕನ್ನಡ), ಬೆಳಿಗ್ಗೆ 11.45 ಹಾಗೂ ರಾತ್ರಿ 7.30ಕ್ಕೆ ಕೆಜಿಎಫ್ ಚಾಪ್ಟರ್ 1 (ಕನ್ನಡ), ಮಧ್ಯಾಹ್ನ 1.30ಕ್ಕೆ ಶಿವಾರ್ಜುನ (ಕನ್ನಡ), ಸಂಜೆ 4ಕ್ಕೆ ಕುರುಕ್ಷೇತ್ರ (ಕನ್ನಡ), ಸಂಜೆ 4.45ಕ್ಕೆ ಟಗರು (ಕನ್ನಡ), ಸಂಜೆ 4.30ಕ್ಕೆ ಮಪ್ತಿ (ಕನ್ನಡ), ಬೆಳಿಗ್ಗೆ 11.45 ಮತ್ತು ರಾತ್ರಿ 8ಕ್ಕೆ ಸ್ಪೈಡರ್‍ಮ್ಯಾನ್ ಹೋಂ ಕಮಿಂಗ್ (ಇಂಗ್ಲಿಷ್) ಸಿನಿಮಾ ಡಿಆರ್‍ಸಿಯ ವಿವಿಧ ಸ್ಕ್ರೀನ್‍ಗಳಲ್ಲಿ ವಾರ ಕಾಲ ಪ್ರದರ್ಶನ ಕಾಣಲಿವೆ.