ಸೊಸೆಯನ್ನು ಮಗಳಂತೆ ಕಾಣಿ: ಅತ್ತೆ-ಮಾವಂದರಿಗೆ ಡಿಸಿಪಿ ಕಿವಿಮಾತು

ಮೈಸೂರು, ಡಿ.26(ಎಸ್‍ಪಿಎನ್)- `ಸೊಸೆ’ಯನ್ನು ಮನೆಯ ಮಗಳಂತೆ ನೋಡುವ ಗುಣವನ್ನು ಎಲ್ಲಾ ಪೋಷಕರು ಬೆಳೆಸಿ ಕೊಳ್ಳಬೇಕು ಎಂದು ನಗರದ ಡಿಸಿಪಿ ಸಿ.ಎನ್.ಪ್ರಕಾಶ್‍ಗೌಡ ಸಲಹೆ ನೀಡಿದರು.

ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಕಲ್ಯಾಣ ಮಂಟಪದಲ್ಲಿ ದೇವ ರಾಜ ಉಪ ವಿಭಾಗದ ವತಿಯಿಂದ `ಅಪ ರಾಧ ತಡೆ ಮಾಸಾಚರಣೆ’ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ `ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಮತ್ತು ಸಬಲೀ ಕರಣ’ ಕುರಿತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚೆಗೆ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿದ್ದು, ಇದನ್ನು ಬಗೆಹರಿಸಿ ಕೊಳ್ಳಲು ನ್ಯಾಯಾಲಯ ಮೊರೆ ಹೋಗು ತ್ತಾರೆ. ಅದರ ಬದಲು ಸಮಸ್ಯೆಗಳು ಸಣ್ಣ ಪ್ರಮಾಣದಲ್ಲಿದ್ದಾಗಲೇ ಹಿರಿಯರ ಸಮ್ಮುಖ ಬಗೆಹರಿಸಿಕೊಳ್ಳಲು ಪ್ರಯತ್ನಿಸಬೇಕು. ಇದ ರಿಂದ ಎರಡು ಕಡೆಯವರಿಗೂ ಅನುಕೂಲ ಎಂದು ಸಲಹೆ ನೀಡಿದರು.

ಸಂಸಾರ ಎಂದ ಮೇಲೆ ಗಂಡ-ಹೆಂಡತಿ ನಡುವೆ ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳು ಸಾಮಾನ್ಯ. ಆದರೆ, ಅದನ್ನೇ ದೊಡ್ಡದು ಮಾಡಿಕೊಂಡು ಸಂಸಾರ ಹಾಳು ಮಾಡಿ ಕೊಳ್ಳಬಾರದು. ಅತ್ತೆ-ಮಾವನೂ ತಮ್ಮ ಮನೆಗೆ ಬರುವ ಸೊಸೆಗೆ ಅಲ್ಲಿನ ವಾತಾ ವರಣಕ್ಕೆ ಹೊಂದಿಕೊಳ್ಳಲು ಸಮಯಾವ ಕಾಶ ನೀಡಬೇಕು. ಇಲ್ಲದಿದ್ದರೆ, ಸಣ್ಣ ಸಮಸ್ಯೆ ಗಳೇ ಮುಂದೆ ದೊಡ್ಡದಾಗಿ ಕಾಡುತ್ತವೆ ಎಂದು ಅರಿವು ಮೂಡಿಸಲೆತ್ನಿಸಿದರು. ದೌರ್ಜನ್ಯಕ್ಕೊಳಗಾದ ಮಹಿಳೆಯರು, ನ್ಯಾಯ ಅರಸಿ ಠಾಣೆಗೆ ಬಂದಾಗ ಪೊಲೀ ಸರು ಸೌಜನ್ಯದಿಂದ ವರ್ತಿಸುವಂತೆ ಎಲ್ಲಾ ಪೊಲೀಸ್ ಠಾಣೆಗೂ ಸೂಚನೆ ನೀಡ ಲಾಗಿದೆ. ನೊಂದ ಮಹಿಳೆಯರಿಗೆ ರಕ್ಷಣೆ ನೀಡಬೇಕಾಗಿರುವುದು ಪೊಲೀಸರ ಮೊದಲ ಕರ್ತವ್ಯ ಎಂದರು.

ಹಿರಿಯ ವಕೀಲ ಮಹಾದೇವ ದೇಶಿಕ್, ಮಹಿಳಾ ದೌರ್ಜನ್ಯದ ಕಾನೂನು ಅಂಶ ಗಳ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಪದ್ಮಾ, ಕೆ.ಆರ್. ನಗರ ತಾಲೂಕು ಸಿಡಿಪಿಓ ಮಮತಾ ಹಾಜರಿದ್ದು, `ಮಹಿಳೆಯರ ಮೇಲಿನ ದೌರ್ಜನ್ಯ, ತಡೆಗಟ್ಟುವಿಕೆ ಮತ್ತು ಸಬಲೀ ಕರಣ’ ಕುರಿತು ಅರಿವು ಮೂಡಿಸಿದರು.

ಕಾರ್ಯಕ್ರಮದಲ್ಲಿ ಆಶಾ ಮತ್ತು ಅಂಗನ ವಾಡಿ ಕಾರ್ಯಕರ್ತೆಯರು, ಮಹಿಳಾ ಸ್ವಸಹಾಯ ಸಂಘದ ಸದಸ್ಯರು, ಕಾವೇರಿ ನರ್ಸಿಂಗ್ ಕಾಲೇಜು ವಿದ್ಯಾರ್ಥಿನಿಯರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಮಹಿಳಾ ಸದಸ್ಯರು ಹಾಗೂ ಮಹಿಳಾ ಪೊಲೀಸ್ ಸಿಬ್ಬಂದಿ ಸೇರಿದಂತೆ 300ಕ್ಕೂ ಹೆಚ್ಚು ಮಹಿಳೆ ಯರು ಕಾರ್ಯಕ್ರಮದಲ್ಲಿದ್ದರು. ದೇವ ರಾಜ ವಿಭಾಗದ ಎಸಿಪಿ ಶಶಿಧರ್, ಆಲನಹಳ್ಳಿ ಠಾಣೆ ಇನ್‍ಸ್ಪೆಕ್ಟರ್ ಹೆಚ್.ಹರಿಯಪ್ಪ, ಉದಯಗಿರಿ ಠಾಣೆ ಇನ್‍ಸ್ಪೆಕ್ಟರ್ ಪೂಣಚ್ಚ ಮತ್ತು ನಜರ್‍ಬಾದ್ ಠಾಣೆ ಇನ್‍ಸ್ಪೆಕ್ಟರ್ ಶ್ರೀಕಾಂತ್ ಕಾರ್ಯಕ್ರಮದಲ್ಲಿದ್ದರು.