ಇನ್ನೂ ಆಗದ ರೈತರ ಸಾಲ ಮನ್ನಾ:  ಅ.15ರಂದು ಪ್ರತಿಭಟನೆ ಎಚ್ಚರಿಕೆ

ಮೈಸೂರು: ಷರತ್ತುಗಳಿಲ್ಲದೆ ಸಾಲ ಮನ್ನಾ ಹಾಗೂ ರೈತರ ಇತರೆ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಅ.15ರಂದು ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಗುವುದು ಎಂದು ಸಹಕಾರ ಭಾರತಿ ದಕ್ಷಿಣ ಪ್ರಾಂತ್ಯ ಕಾರ್ಯದರ್ಶಿ ಎಸ್.ಆರ್.ನಾರಾಯಣ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಾಲ ಮನ್ನಾ ಘೋಷಣೆಯಾಗಿ 4 ತಿಂಗಳಾದರೂ ಸಹಕಾರ ಸಂಘಗಳು ಮತ್ತು ಬ್ಯಾಂಕ್ ಗಳಿಗೆ ಸಾಲಮನ್ನಾ ಆದೇಶ ಬಂದಿಲ್ಲ. ಹಣ ಬಿಡುಗಡೆಯಾಗಿಲ್ಲ ಎಂದು ಬ್ಯಾಂಕ್ ನವರು ರೈತರಿಗೆ ಸಾಲ ಮರುಪಾವತಿ ಮಾಡುವಂತೆ ನೋಟೀಸ್ ನೀಡುತ್ತಿದ್ದು, ಸರ್ಕಾರ ಕೂಡಲೇ ಸಾಲಮನ್ನಾ ಅದೇಶ ನೀಡಬೇಕು ಎಂದು ಆಗ್ರಹಿಸಿದರು. ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ನೀಡಿದ ಭರವಸೆಯಂತೆ ಯಾವುದೇ ನಿಬಂಧನೆ ಇಲ್ಲದೇ, ರೈತರ ಸಾಲ ಮನ್ನಾ ಮಾಡಬೇಕು. ಆರ್‍ಟಿಸಿಯಲ್ಲಿ ಖಾತೆದಾರರಾದ ರೈತರು ಸಹಕಾರ ಸಂಘದಲ್ಲಿ ಬೆಳೆ ಸಾಲ ಪಡೆದರೆ ಅವರ ಬೇರೆ ಆದಾಯದ ಮೂಲವನ್ನು ಪರಿಗಣಿಸದೆ ಅವರು ಪಡೆದ ಬೆಳೆ ಸಾಲವನ್ನು ಮನ್ನಾ ಮಾಡಬೇಕು. ಕುಟುಂಬಕ್ಕೊಬ್ಬ ಫಲಾನುಭವಿ ಎಂಬ ನಿರ್ಬಂಧ ತೆಗೆದು ಹಾಕಿ ಸಾಲ ಪಡೆದ ಎಲ್ಲಾ ಅರ್ಹ ಫಲಾನುಭವಿಗಳ ಸಾಲಮನ್ನಾ ಆಗಬೇಕು ಎಂದು ಒತ್ತಾಯಿಸಿದರು.