ಕೊಡಗಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‍ಗೆ ಶಿಷ್ಟಾಚಾರದಲ್ಲಿ ಲೋಪ

ಬೆಂಗಳೂರು: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ನಡುವಿನ ಜಟಾಪಟಿಗೆ ತೆರೆ ಎಳೆಯಲು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಅವರು ಟ್ವಿಟರ್ ಮೂಲಕ ವಿಷಾದ ವ್ಯಕ್ತಪಡಿಸಿದ್ದಾರೆ.

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೊಡಗಿನ ರಕ್ಷಣಾ ಕಾರ್ಯಗಳಿಗೆ ಸಾಧ್ಯವಾದ ಎಲ್ಲಾ ನೆರವನ್ನು ನೀಡಿದ್ದು, ಕೊಡಗಿನಲ್ಲಾಗಿರುವ ಹಾನಿ ಮತ್ತು ಪುನರ್ವಸತಿ ಕಾರ್ಯಗಳ ಪರಿಶೀಲನೆ ನಡೆಸಲು ಅವರು ಖುದ್ದು ಭೇಟಿ ನೀಡಿದ್ದರು. ವ್ಯತಿರಿಕ್ತ ಪರಿಸ್ಥಿತಿಗಳ ಮಧ್ಯೆಯೂ ಜಿಲ್ಲಾಡಳಿತ ಹಾಗೂ ಸರ್ಕಾರ ಶಿಷ್ಟಾಚಾರವನ್ನು ಅನುಸರಿಸಿದೆ. ಹೀಗಿದ್ದರೂ ರಕ್ಷಣಾ ಸಚಿವೆ ಕೆಲ ಅನಾನುಕೂಲ ಎದುರಿಸಿರುವುದು ದುರದೃಷ್ಟಕರ ವಿಷಯವಾಗಿದ್ದು, ಅದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ. ಸಣ್ಣಪುಟ್ಟ ವೈಮನಸ್ಸುಗಳನ್ನು ಬದಿಗೊತ್ತಿ, ನೆರೆ ಪೀಡಿತ ಕೊಡ ಗಿನ ಪುನರ್ವಸತಿಗೆ ಕೈ ಜೋಡಿಸಬೇಕಾಗಿದೆ. ಈ ಘಟನೆಗಳಿಗೆ ಬೇರೆ ಬಣ್ಣ ಬಳಿಯವುದು ಬೇಡವೆಂದು ಅವರು ಮನವಿ ಮಾಡಿದ್ದಾರೆ.

ಕೊಡಗಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ರಕ್ಷಣಾ ತಂಡಗಳು ಹಗಲು ರಾತ್ರಿ ರಕ್ಷಣಾ ಕಾರ್ಯ ಮತ್ತು ಪುನರ್ವಸತಿ ಕಾರ್ಯಗಳನ್ನು ಕೈಗೊಳ್ಳುತ್ತಿದ್ದು, ಕೇಂದ್ರ ಸರ್ಕಾರ ವ್ಯಾಪಕ ನೆರವನ್ನು ನೀಡುತ್ತಿದೆ ಎಂದು ಸಿಎಂ ಕುಮಾರ ಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ನಾನು ಕೇಂದ್ರ ಸರ್ಕಾರ ಅದರಲ್ಲೂ ಮುಖ್ಯವಾಗಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ನೀಡುತ್ತಿರುವ ನೆರವನ್ನು ಮುಂದುವರಿಸುವ ನಿಟ್ಟಿನಲ್ಲಿ ಎದುರು ನೋಡುತ್ತಿದ್ದೇನೆ ಎಂದು ವಿವಾದಕ್ಕೆ ತೆರೆ ಎಳೆಯಲು ಯತ್ನಿಸಿದ್ದಾರೆ.