ಮಾಜಿ ಸಿಂಡಿಕೇಟ್ ಸದಸ್ಯ ಎಂಎಸ್‍ಎಸ್  ಕುಮಾರ್ ವಿರುದ್ಧ ಕ್ರಮಕ್ಕೆ ಆಗ್ರಹ

ಮೈಸೂರು:  ಮೈಸೂರು ತಾಪಂ ಸದಸ್ಯ ಎಂ.ಎಸ್.ಎಸ್. ಕುಮಾರ್ ಅವರನ್ನು ಮೈಸೂರು ವಿವಿ ಸಿಂಡಿಕೇಟ್ ಸದಸ್ಯರನ್ನಾಗಿ ಅಕ್ರಮವಾಗಿ ನೇಮಕ ಮಾಡ ಲಾಗಿದ್ದು, ಲಾಭದಾಯಕ ಹುದ್ದೆ ಕುರಿತಂತೆ ಮೈಸೂರು ವಿವಿ ಕುಲಸಚಿವರಾಗಿದ್ದ ಭಾರತಿಯವರು ರಾಜ್ಯ ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಕರ್ನಾಟಕ ಟೀಚರ್ಸ್ ಫೋರಂ ಅಧ್ಯಕ್ಷ ಶರತ್‍ರಾಜ್ ಇಂದಿಲ್ಲಿ ಆರೋಪಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾಭದಾಯಕ ಹುದ್ದೆ ಕುರಿತಂತೆ ಪ್ರಶ್ನಿಸಿ ತಾವು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಈ ಬಗ್ಗೆ ಸೂಕ್ತ ದಾಖಲೆ ಗಳನ್ನು ಒದಗಿಸುವಂತೆ ಕುಲಸಚಿವರಿಗೆ ಸೂಚಿಸಿತ್ತು. ಆದರೆ, 22.6.2017ರಂದು ನಡೆದ ಮೈಸೂರು ವಿವಿ ಸಿಂಡಿಕೇಟ್ ಸಭೆಯಲ್ಲಿ, ಸಭೆಗೆ ಹಾಜರಾಗುವ ಸದಸ್ಯರಿಗೆ ರೂ.3,500 ಬದಲಾಗಿ ರೂ.5000 ಗಳಿಗೆ ಗೌರವ ಧನ ನೀಡಲು ಸಭೆಯು ತೀರ್ಮಾನಿಸಿದೆ ಎಂದು ಅನುಮೋದಿಸಿರುವ ಕುಲಸಚಿವರು, 28.4.2018ರಂದು ಚುನಾವಣಾ ಆಯೋಗಕ್ಕೆ ಬರೆದಿರುವ ಪತ್ರದಲ್ಲಿ ಸಿಂಡಿಕೇಟ್ ಸದಸ್ಯರಿಗೆ ಯಾವುದೇ ರೀತಿಯ ಗೌರವ ಧನ ನೀಡುತ್ತಿಲ್ಲ ಎಂದು ತಪ್ಪು ಮಾಹಿತಿ ನೀಡಿದ್ದಾರೆ. ಇದು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ಮಾಹಿತಿಯಿಂದ ಬಯಲಾಗಿದೆ ಎಂದರು.

ಅಕ್ರಮವಾಗಿ ನೇಮಕಗೊಂಡ ಎಂ.ಎಸ್.ಎಸ್.ಕುಮಾರ್ ಹಾಗೂ ತಪ್ಪು ಮಾಹಿತಿ ನೀಡಿ, ಸರ್ಕಾರವನ್ನು ದಾರಿ ತಪ್ಪಿಸಿರುವ ಮಾಜಿ ಕುಲಸಚಿವೆ ಡಿ.ಭಾರತಿ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವರು ಹಾಗೂ ರಾಜ್ಯಪಾಲರಲ್ಲಿ ಮನವಿ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಟಿ.ಆರ್.ರವಿ, ಎನ್.ನಾಗೇಶ್ ಉಪಸ್ಥಿತರಿದ್ದರು.