ಒಳಚರಂಡಿ ಸ್ವಚ್ಛತಾ ಗುತ್ತಿಗೆ ಕಾರ್ಮಿಕರ ಬೇಡಿಕೆ ಶೀಘ್ರ ಈಡೇರಿಕೆ

ಮೈಸೂರು, ಡಿ.16(ಎಂಕೆ)- ಮೈಸೂರು ಮಹಾನಗರ ಪಾಲಿಕೆಯ ಒಳಚರಂಡಿ ಸ್ವಚ್ಛತಾ ಗುತ್ತಿಗೆ ಕಾರ್ಮಿಕರ ಬೇಡಿಕೆಗಳನ್ನು ಶೀಘ್ರದಲ್ಲಿಯೇ ಈಡೇರಿಸಲಾಗುವುದು ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ ಹೇಳಿದರು.

ಬೆಳಗಿನ ಉಪಾಹಾರಕ್ಕಾಗಿ ಮತ್ತು 231 ಮಂದಿ ಒಳಚರಂಡಿ ಗುತ್ತಿಗೆ ಕಾರ್ಮಿಕರ ಖಾಯಂಗೆ ಒತ್ತಾಯಿಸಿ 3 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ಒಳಚರಂಡಿ ಸ್ವಚ್ಛತಾ ಗುತ್ತಿಗೆ ಕಾರ್ಮಿಕರೊಂದಿಗೆ ಮೇಯರ್ ತಸ್ನೀಂ ಅವರ ಅಧ್ಯಕ್ಷತೆಯಲ್ಲಿ ಪಾಲಿಕೆ ಸಭಾಂಗಣ ದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಆಯುಕ್ತರು, 24.10 ಕಾರ್ಯಕ್ರಮದಡಿ ಬೆಳಗಿನ ಉಪಹಾರ ಭತ್ಯೆ ಕೊಡಲು ವ್ಯವಸ್ಥೆ ಮಾಡಲಾಗುವುದು. ಈ ಕುರಿತು ಜಿಲ್ಲಾ ಧಿಕಾರಿಗಳಿಗೆ ಪತ್ರ ಬರೆದು ಅನುಮತಿ ನೀಡುವಂತೆ ಕೋರಲಾಗುವುದು ಎಂದರು.

ಪಾಲಿಕೆಯ ಒಳಚರಂಡಿ ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸುವ ಸಂಬಂಧ ಸರ್ಕಾರದಿಂದಲೇ ವಿಶೇಷ ನೇಮಕಾತಿ ಆದೇಶವಾಗಬೇಕು. ಮುಂದಿನ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ನಿರ್ಧರಿಸಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ವಿಶೇಷ ನೇಮಕದ ಆದೇಶವಾದರೆ 231 ಮಂದಿ ಒಳಚರಂಡಿ ಗುತ್ತಿಗೆ ಕಾರ್ಮಿಕರಲ್ಲಿ 116 ಮಂದಿ ಖಾಯಂ ನೌಕರರಾದರೆ, ಉಳಿದ 115 ಮಂದಿ ಕಾರ್ಮಿಕರಿಗೆ ನೇರಪಾವತಿ ಮೂಲಕ ವೇತನ ನಿರ್ವಹಣೆ ಮಾಡಲಾಗುವುದು ಎಂದರು.

ಉಪ ಮೇಯರ್ ಶ್ರೀಧರ್, ಪಾಲಿಕೆ ಸದಸ್ಯರಾದ ಬಿ.ವಿ.ಮಂಜುನಾಥ್, ಸುಬ್ಬಯ್ಯ, ಪ್ರೇಮಾ ಶಂಕರೇಗೌಡ, ಮೈಸೂರು ಮಹಾನಗರ ಪಾಲಿಕೆ ಪೌರಕಾರ್ಮಿಕರ ಸಂಘದ ಉನ್ನತ ಸಮಿತಿ ಅಧ್ಯಕ್ಷ ಎನ್.ಮಾರ, ಕಾರ್ಯದರ್ಶಿ ಶ್ರೀನಿವಾಸ್, ಒಳಚರಂಡಿ ಕಾರ್ಮಿಕರ ಸಂಘದ ಅಧ್ಯಕ್ಷ ಪಳನಿ, ಕಾರ್ಯಾಧ್ಯಕ್ಷ ಕುಮಾರಸ್ವಾಮಿ, ಜಿಲ್ಲಾ ಸಫಾಯಿ ಕರ್ಮಚಾರಿ ಸದಸ್ಯ ಸಿ.ಆರ್.ರಾಚಯ್ಯ, ಎಂ.ಕೆ.ಮಹದೇವ, ಗಣೇಶ್ ಮತ್ತಿತರರಿದ್ದರು.