ರೀಡ್ ಅಂಡ್ ಟೇಲರ್ ಕಾರ್ಮಿಕರ ಪುನರ್ ನೇಮಕಕ್ಕೆ ಒತ್ತಾಯ

ಮೈಸೂರು, ಫೆ.6(ಆರ್‍ಕೆಬಿ)-ಕೆಲಸದಿಂದ ತೆಗೆದುಹಾಕಿದ ಕಾರ್ಮಿಕರನ್ನು ಮರಳಿ ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂದು ರೀಡ್ ಅಂಡ್ ಟೇಲರ್ ಎಂಪ್ಲಾಯೀಸ್ ಯೂನಿಯನ್, ಕಾರ್ಖಾನೆ ಆಡಳಿತವನ್ನು ಒತ್ತಾಯಿಸಿದೆ.

ಮೈಸೂರು ಪತ್ರಕರ್ತರ ಭವನದಲ್ಲಿ ಗೋಷ್ಠಿ ಯಲ್ಲಿ ಮಾತನಾಡಿದ ಕಾರ್ಖಾನೆ ಎಂಪ್ಲಾಯೀಸ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಎಂ.ಕೆ.ಶಶಿಕುಮಾರ್, ಕಾರ್ಖಾನೆಯ ಆಡಳಿತ ಮಂಡಳಿ ವಿಸರ್ಜನೆಯಾಗಿದೆ ಎಂದು ಹೇಳಿ ಹೊಸ ಹೆಸರನ್ನಿಟ್ಟು ಕೊಂಡು ಹಿಂದಿನ ಆಡಳಿತ ಮಂಡಳಿಯೇ ಕಾರ್ಖಾನೆಯನ್ನು ಪುನರಾರಂಭಿಸಿದೆ. ಹಿಂದಿನ ಖಾಯಂ ನೌಕರರನ್ನು ಪರಿಗಣಿಸದೆ ಗುತ್ತಿಗೆ ಆಧಾರದ ಮೇಲೆ ಕಡಿಮೆ ವೇತನಕ್ಕೆ ಕಾರ್ಮಿಕರನ್ನು ನೇಮಿಸಿ ಕೊಳ್ಳಲಾಗಿದೆ ಎಂದು ದೂರಿದರು. ತಮ್ಮ ಬೇಡಿಕೆ ಈಡೇರಿಕೆಗಾಗಿ ಕಾರ್ಮಿಕರು ಕಳೆದ 82 ದಿನಗಳಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ. ಹೀಗಿದ್ದು ನಮ್ಮ ಪ್ರತಿಭಟನೆಗೆ ಕಾರ್ಮಿಕ ಇಲಾಖೆ ಅಧಿಕಾರಿಗಳಾಗಲೀ, ಕಾರ್ಖಾನೆಯ ಆಡಳಿತ ಮಂಡಳಿಯಾಗಲಿ ಸ್ಪಂದಿಸುತ್ತಿಲ್ಲ. ಹೀಗಾಗಿ ನೌಕರರು ಬೀದಿಪಾಲಾಗಿದ್ದು, ಉಪವಾಸ ಸತ್ಯಾಗ್ರಹ ನಡೆಸುವುದಷ್ಟೇ ಬಾಕಿ ಉಳಿದಿದೆ. ಕೆಲಸಕ್ಕಾಗಿ ಪರಿ ಪರಿಯಾಗಿ ಬೇಡಿಕೊಂಡರೂ ಅಧಿಕಾರಿಗಳು ಸ್ಪಂದಿಸದ ಹಿನ್ನೆಲೆ ಯುವತಿ ಯೊಬ್ಬರು ಮೃತಪಟ್ಟಿದ್ದಾರೆ. ಆಕೆಗೆ ಕೆಲಸ ನೀಡಿದ್ದರೆ ಇಂತಹ ಸಾವು ಸಂಭವಿಸುತ್ತಿರಲಿಲ್ಲ. ಮುಂದೆಯೂ ಬೀದಿಗೆ ಬಿದ್ದಿರುವ ಕಾರ್ಮಿಕರು ಸಾಯುವ ಮುನ್ನ ಕೆಲಸ ನೀಡಬೇಕು ಎಂದರು. ಹೊರಗುತ್ತಿಗೆ ಕೈಬಿಟ್ಟು ನಮ್ಮನ್ನೇ ಕೆಲಸಕ್ಕೆ ತೆಗೆದುಕೊಳ್ಳಬಹುದಾಗಿದೆ. ನಮ್ಮ ಮನವಿಯನ್ನು ಆಡಳಿತ ಮಂಡಳಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.