ಎಸ್‍ಟಿ ಮೀಸಲು ಶೇ.7.50ಕ್ಕೆ ಹೆಚ್ಚಿಸಲು ಆಗ್ರಹಿಸಿ ಇಂದಿನಿಂದ ಪ್ರಸನ್ನಾನಂದ ಶ್ರೀ ಅಹೋರಾತ್ರಿ ಧರಣಿ

ಮೈಸೂರು, ಅ.20(ಪಿಎಂ)- ಪರಿಶಿಷ್ಟ ಪಂಗಡಕ್ಕೆ ಇದೇ ಅ.31ರೊಳಗೆ ಮೀಸ ಲಾತಿ ಪ್ರಮಾಣವನ್ನು ಶೇ.7.50ಕ್ಕೆ ಹೆಚ್ಚಳ ಮಾಡುವಂತೆ ರಾಜ್ಯ ಸರ್ಕಾರವನ್ನು ಒತ್ತಾ ಯಿಸಿ ದಾವಣಗೆರೆ ಜಿಲ್ಲೆ ಹರಿಹರ ತಾಲೂ ಕಿನ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಪೀಠಾಧ್ಯಕ್ಷ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಅ.21 ರಿಂದ ಅಹೋರಾತ್ರಿ ಪ್ರತಿಭಟನಾ ಧರಣಿ ನಡೆಸಲಿದ್ದು, ಸಮುದಾಯ ಹೆಚ್ಚಿನ ಬೆಂಬಲ ನೀಡಬೇಕೆಂದು ಕರ್ನಾಟಕ ರಾಜ್ಯ ನಾಯ ಕರ ಹಿತರಕ್ಷಣಾ ವೇದಿಕೆ ಕೋರಿದೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆ ಸಿದ ವೇದಿಕೆ ರಾಜ್ಯಾಧ್ಯಕ್ಷ ದ್ಯಾವಪ್ಪ ನಾಯಕ, ಕಳೆದ ವಿಧಾನಸಭಾ ಚುನಾವಣೆ ಪೂರ್ವ ದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ 24 ಗಂಟೆ ಯೊಳಗೆ ಪರಿಶಿಷ್ಟ ಪಂಗಡಕ್ಕೆ ಶೇ.7.5ರಷ್ಟು ಮೀಸಲಾತಿ ಕಲ್ಪಿಸುವುದಾಗಿ ಭರವಸೆ ನೀಡಿ ದ್ದರು. ಜೊತೆಗೆ ಮೈತ್ರಿ ಸರ್ಕಾರದ ಅವಧಿ ಯಲ್ಲಿ ಮೀಸಲಾತಿ ಹೆಚ್ಚಿಸುವ ಸಂಬಂಧ ಅಧ್ಯಯನಕ್ಕೆ ನ್ಯಾ.ನಾಗಮೋಹನದಾಸ್ ನೇತೃತ್ವದಲ್ಲಿ ಆಯೋಗ ರಚಿಸಲಾಗಿತ್ತು. ಆಯೋಗವು 3 ತಿಂಗಳ ಹಿಂದೆಯೇ ವರದಿ ಸಲ್ಲಿಸಿದ್ದರೂ ಸಿಎಂ ಯಡಿ ಯೂರಪ್ಪ ಮೀಸಲಾತಿ ಹೆಚ್ಚಿಸುವ ಸಂಬಂಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವೇದಿಕೆ ಪ್ರಧಾನ ಕಾರ್ಯದರ್ಶಿ ಪ್ರಭಾ ಕರ್ ಹುಣಸೂರು, ಜಿಲ್ಲಾಧ್ಯಕ್ಷ ಶ್ರೀಧರ್ ಚಾಮುಂಡಿಬೆಟ್ಟ, ಉಪಾಧ್ಯಕ್ಷ ರಾಘ ವೇಂದ್ರ, ನಗರಾಧ್ಯಕ್ಷ ರಾಜು ಮಾರ್ಕೆಟ್ ಮತ್ತಿತರರು ಗೋಷ್ಠಿಯಲ್ಲಿದ್ದರು.