ಮೇ 2ರಿಂದ ಪಿಯು ತರಗತಿ ಪ್ರಾರಂಭದ ಅವೈಜ್ಞಾನಿಕ ಆದೇಶ ವಾಪಸ್‍ಗೆ ಪರಿಷತ್ ಉಪ ಸಭಾಪತಿ ಒತ್ತಾಯ

ಮೈಸೂರು: ಪದವಿಪೂರ್ವ ಕಾಲೇಜಿನ ತರಗತಿಗಳನ್ನು ಮೇ 2ರಿಂದ ಪ್ರಾರಂಭಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಹೊರಡಿಸಿರುವ ಅವೈಜ್ಞಾನಿಕ ಆದೇಶ ವನ್ನು ವಾಪಸು ಪಡೆಯಬೇಕು. ಎಂದಿನಂತೆ ಜೂ.1ರಿಂದಲೇ ಕಾಲೇಜು ತೆರೆಯಬೇಕು ಎಂದು ವಿಧಾನ ಪರಿಷತ್ ಉಪ ಸಭಾಪತಿ ಮರಿತಿಬ್ಬೇಗೌಡ ಇಂದಿಲ್ಲಿ ಒತ್ತಾಯಿಸಿದರು.

ಸಾರ್ವತ್ರಿಕ ಚುನಾವಣೆಯ ಅಧಿಸೂಚನೆ ಜಾರಿಯಲ್ಲಿರುವಾಗಲೇ ಇಂತಹ ಸುತ್ತೋಲೆ ಹೊರಡಿಸುವುದು ನಿಯಮ ಬಾಹಿರವಾಗಿದೆ. ಈ ಕುರಿತಂತೆ ವಿಧಾನ ಪರಿಷತ್ ಸದಸ್ಯರು, ಉಪನ್ಯಾಸಕರ ಸಂಘಟನೆಗಳು, ಉಪನ್ಯಾಸಕರ ಅಭಿಪ್ರಾಯಗಳನ್ನು ಪಡೆಯದೇ ಏಕಪಕ್ಷೀಯ ತೀರ್ಮಾನ ಕೈಗೊಂಡು ಆದೇಶ ಹೊರಡಿಸಲಾಗಿದೆ ಎಂದು ದೂರಿದರು. ಮೇ ತಿಂಗಳಲ್ಲಿ ರಾಜ್ಯಾದ್ಯಂತ ಸರಾಸರಿ ತಾಪಮಾನ 35ರಿಂದ 40 ಡಿಗ್ರಿವರೆಗೂ ಇರುವ ಸಾಧ್ಯತೆಗಳಿದ್ದು, ವಿದ್ಯಾರ್ಥಿಗಳು, ಉಪನ್ಯಾಸಕರು ಕಾಂiÀರ್i ನಿರ್ವಹಿಸಲು ಕಷ್ಟವಾಗುತ್ತದೆ.

ಅಲ್ಲದೆ 20 ದಿನಗಳ ಕಾಲ ಉಪನ್ಯಾಸಕರು ಚುನಾವಣಾ ಕರ್ತವ್ಯದಲ್ಲಿರುತ್ತಾರೆ. ಇವೆಲ್ಲವನ್ನೂ ತಿಳಿದಿದ್ದರೂ ಮೇ 2ರಿಂದ ಪಿಯು ಕಾಲೇಜುಗಳ ತರಗತಿಗಳನ್ನು ಪ್ರಾರಂಭಿಸುವಂತೆ ನೀಡಿರುವ ಶಿಫಾರಸು ಮತ್ತು ಸುತ್ತೋಲೆಯನ್ನು ವಾಪಸು ಪಡೆಯಬೇಕು ಎಂದು ಅವರು ಗುರುವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಜಯರಾಂ ಕಿಲಾರ, ಡಾ.ನಯೀಮುಲ್ಲಾ ಷರೀಫ್, ರಾಜೇಂದ್ರ, ಪ್ರೊ.ಶಂಕರೇಗೌಡ ಉಪಸ್ಥಿತರಿದ್ದರು.