ಸರ್ಕಾರ ಉಳಿಸಿಕೊಳ್ಳಲು ಕಣಕ್ಕಿಳಿದ ದೇವೇಗೌಡರು

ಬೆಂಗಳೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಸ್ವತಃ ಅಖಾಡಕ್ಕೆ ಧುಮುಕಿದ್ದಾರೆ. ಒಂದೆಡೆ ಕಾಂಗ್ರೆಸ್ ವರಿಷ್ಠರ ಜೊತೆ ಸಂಪರ್ಕದಲ್ಲಿರುವ ದೇವೇಗೌಡರು ಮತ್ತೊಂದೆಡೆ ರಾಜ್ಯ ಬಿಜೆಪಿ ನಾಯಕರನ್ನು ಕಟ್ಟಿ ಹಾಕುವ ಪ್ರಯತ್ನವಾಗಿ ಕೇಂದ್ರ ಬಿಜೆಪಿ ನಾಯಕರ ಜೊತೆಯೂ ಸಂಪರ್ಕ ಸಾಧಿಸಿದ್ದಾರೆ.

ಮತ್ತೊಂದೆಡೆ ಕಳೆದ ಕೆಲವು ದಿನಗಳಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಸಂಪರ್ಕಿಸಿ ಬೃಹತ್ ಮೊತ್ತದ ಹಣ ಹಾಗೂ ಸಚಿವಗಿರಿ ಆಮಿಷ ಒಡ್ಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಆಪ್ತ ಕೂಟ, ಆಡಳಿತ ಪಕ್ಷದ ಶಾಸಕರ ಜೊತೆ ನಡೆಸಿರುವ ಸಂಭಾಷಣೆಯ ದಾಖಲೆಗಳನ್ನು ಸಿದ್ಧ ಮಾಡಿಟ್ಟು ಕೊಂಡಿದ್ದಾರೆ. ರಾಮಕೃಷ್ಣ ಹೆಗಡೆ, ಈ ಹಿಂದೆ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ತಮ್ಮನ್ನು ರಾಜಕೀಯವಾಗಿ ಮುಗಿ ಸಲು, ತಾವು ಹಾಗೂ ಅಜಿತ್‍ಸಿಂಗ್ ನಡುವಿನ ದೂರವಾಣಿ ಸಂಭಾಷಣೆಯನ್ನು ಕದ್ದು ಆಲಿಕೆ ಮಾಡಿ ಮಾಧ್ಯಮಗಳಿಗೆ ಬಿಡು ಗಡೆ ಮಾಡುವ ಮೂಲಕ ತಾವೇ ಅಧಿಕಾರ ಕಳೆದುಕೊಂಡಿದ್ದರು. ಆದರೆ ಇದೀಗ ಆಧುನಿಕ ತಂತ್ರಜ್ಞಾನ ಬೆಳೆದಿದೆ, ದೂರವಾಣಿ ಸಂಪರ್ಕಕ್ಕಿಂತ ಮೊಬೈಲ್ ಯುಗ ಜೋರಾಗಿದೆ, ಗೌಡರಿಗೆ ಮೈತ್ರಿ ಸರ್ಕಾರದ ಕೆಲವು ಶಾಸಕರ ಜೊತೆ ಬಿಜೆಪಿ ನಾಯಕರು ನಡೆಸಿರುವ ಸಂಭಾಷಣೆ ಹಾಗೂ ನಗರದ ಮಲ್ಲೇಶ್ವರದ ಎರಡು ಮನೆಗಳಲ್ಲಿ ನಡೆದಿರುವ ಸರ್ಕಾರ ಉರುಳಿಸುವ ಷಡ್ಯಂತರದ ದಾಖಲೆ ತಲುಪಿದೆ.

ಇದನ್ನೇ ಆಧಾರವಾಗಿ ಇಟ್ಟುಕೊಂಡು ತಮ್ಮ ಪುತ್ರನ ಸರ್ಕಾರ ಉಳಿಸಲು ನಿನ್ನೆ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ಜೊತೆ ಮಾತನಾಡಿರುವುದಲ್ಲದೆ, ದೆಹಲಿಯಲ್ಲಿರುವ ತಮ್ಮ ಆಪ್ತ ಹಿರಿಯ ವಕೀಲರ ಜೊತೆಯೂ ಸಮಾಲೋಚನೆ ಮಾಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ಆಪತ್ತುತರುವ ಪ್ರಯತ್ನ ಬಿಜೆಪಿಯಿಂದ ಆಗಿದ್ದೇ ಆದರೆ, ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿಗೆ ಮುಜುಗರ ಸೃಷ್ಟಿಸಿ ಲೋಕಸಭಾ ಚುನಾವಣೆಯಲ್ಲಿ ಆ ಪಕ್ಷಕ್ಕೆ ಮತ್ತಷ್ಟು ಹಿನ್ನಡೆ ಉಂಟು ಮಾಡುವ ಉದ್ದೇಶ ಹೊಂದಿದ್ದಾರೆ.

ಈ ಕಾರ್ಯತಂತ್ರದ ಭಾಗವಾಗಿ ಕೇಂದ್ರದ ಬಿಜೆಪಿ ವರಿಷ್ಠರಿಗೆ ಇತ್ತೀಚಿನ ದೆಹಲಿ ಭೇಟಿ ಸಂದರ್ಭದಲ್ಲಿ ಪರೋಕ್ಷವಾಗಿ ಇಲ್ಲಿನ ಬೆಳವಣಿಗೆಗಳು ಸ್ಥಳೀಯ ನಾಯಕರು ಒಡ್ಡುತ್ತಿರುವ ಆಮಿಷಗಳ ಬಗ್ಗೆ ಮಾಹಿತಿ ರವಾನೆ ಮಾಡಿದ್ದಾರೆ.

ದೇವೇಗೌಡರು ಚರ್ಚೆ ನಡೆಸಿದ ನಂತರವೇ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಉಪ ಮುಖ್ಯಮಂತ್ರಿ ಡಾ|| ಜಿ. ಪರಮೇಶ್ವರ್, ಬಂಡಾಯ ನಾಯಕ ರಮೇಶ್ ಜಾರಕಿಹೊಳಿ ಅವರನ್ನು ಕರೆಸಿಕೊಂಡು ಮಾತನಾಡಿದ್ದಾರೆ.

ಮತ್ತೊಂದು ಬೆಳವಣಿಗೆಯಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಕಾಂಗ್ರೆಸ್‍ನ ಮೂರನೇ ಒಂದು ಭಾಗದಷ್ಟು ಸದಸ್ಯರನ್ನು ಸೆಳೆದುಕೊಂಡು ಬಂದರೆ ಮಾತ್ರ ನಿಮಗೆ ಸರ್ಕಾರ ರಚನೆಗೆ ಹಸಿರು ನಿಶಾನೆ ನೀಡುತ್ತೇವೆ ಎಂಬ ಸ್ಪಷ್ಟ ಸಂದೇಶವನ್ನು ರಾಜ್ಯದ ನಾಯಕರಿಗೆ ನೀಡಿದ್ದಾರೆ.

ಎಂಟು-ಹತ್ತು ಶಾಸಕರನ್ನು ಆಪರೇಷನ್ ಕಮಲ ಮಾಡಿ ಮತ್ತೊಮ್ಮೆ ಅಪಮಾನಕ್ಕೆ ಸಿಲುಕುವುದು ಬೇಡ. ಈಗಾಗಲೇ ಸಂಖ್ಯಾಬಲ ಇಲ್ಲದೆ, ಕರ್ನಾಟಕದಲ್ಲಿ ಸರ್ಕಾರ ರಚಿಸಲು ಹೋಗಿ ಪಕ್ಷಕ್ಕೆ ಮುಜುಗರವಾಗಿದೆ, ಇಂತಹ ಪರಿಸ್ಥಿತಿಯನ್ನು ಮತ್ತೊಮ್ಮೆ ತರಬೇಡಿ.

ಮೊದಲು ಅಗತ್ಯ ಸಂಖ್ಯಾಬಲವನ್ನು ಒಟ್ಟುಗೂಡಿಸಿರುವುದು ಮನದಟ್ಟು ಮಾಡಿದ ನಂತರವಷ್ಟೇ ಮುಂದಿನ ಬೆಳವಣಿಗೆ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ ಎಂಬ ಖಡಕ್ ಮಾತುಗಳನ್ನು ಆಡಿದ್ದಾರೆ. ಮತ್ತೊಂದೆಡೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇಂದು ಮೈಸೂರು ಪ್ರವಾಸ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸ್ವಲ್ಪ ದಿನ ಕಾದು ನೋಡಿ ಬಿಜೆಪಿಯ ಐವರು ಶಾಸಕರೇ ರಾಜೀನಾಮೆ ಕೊಡುತ್ತಾರೆ ಎಂದು ಬಾಂಬ್ ಸಿಡಿಸಿದ್ದಾರೆ. ಅಷ್ಟೇ ಅಲ್ಲ, ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಬಿದ್ದೇ ಹೋಯ್ತು ಎಂಬ ರೀತಿ ಸುದ್ದಿಗಳು ಬಿತ್ತರವಾಗುತ್ತಿರುವ ಬಗ್ಗೆ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ. ತೋಳ ಬಂತು ತೋಳ ಎಂಬ ಕತೆಯಂತೆ, ಸರ್ಕಾರ ಬೀಳುತ್ತದೆ ಎಂಬ ಬಿಸಿ ಬಿಸಿ ಸುದ್ದಿ ಮಾಧ್ಯಮಗಳಲ್ಲಿ ದಿನವಹಿ ಬಿತ್ತರವಾಗುತ್ತಿವೆ. ಸ್ವಲ್ಪ ದಿನ ಕಾದು ನೋಡಿ, ಬಿಜೆಪಿಯವರೇ ಯೂಟರ್ನ್ ಹೊಡೆಯಲಿದ್ದಾರೆ, ಆ ಪಕ್ಷದ ಶಾಸಕರಿಂದಲೇ ರಾಜೀನಾಮೆ ಕೊಡಿಸೋಣ ಎಂದರು.