ಭಕ್ತರು, ಪ್ರವಾಸಿಗರಿಗೆ ಚಾಮುಂಡಿಬೆಟ್ಟವನ್ನೇರಲು ಶೀಘ್ರದಲ್ಲೇ ಮತ್ತೊಂದು ಮೆಟ್ಟಿಲು ಮಾರ್ಗ ಲಭ್ಯ

ಮೈಸೂರು, ಡಿ.13- ನಾಡಿನ ಅಧಿದೇವತೆ ಚಾಮುಂಡೇಶ್ವರಿ ಸನ್ನಿಧಿಗೆ ಭಕ್ತರು, ಪ್ರವಾಸಿಗರು ಕಾಲ್ನಡಿಗೆಯಲ್ಲಿ ತೆರಳಲು ಶೀಘ್ರವೇ ಮತ್ತೊಂದು ಮೆಟ್ಟಿಲು ಮಾರ್ಗ ಲಭ್ಯವಾಗಲಿದ್ದು, ಹಲವು ವರ್ಷ ಗಳಿಂದ ಪಾಳುಬಿದ್ದ ಸ್ಥಿತಿಗೆ ದೂಡಲ್ಪಟ್ಟಿದ್ದ ಉತ್ತನಹಳ್ಳಿ ಗ್ರಾಮದ ಕಡೆಯಿಂದ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ಮೆಟ್ಟಿಲು ಮಾರ್ಗವನ್ನು 99.50 ಲಕ್ಷ ರೂ. ವೆಚ್ಚದಲ್ಲಿ ಪುನರ್ ನಿರ್ಮಿಸಲು ದೇವಾ ಲಯದ ಆಡಳಿತ ಮಂಡಲಿ ಕ್ರಮ ಕೈಗೊಂಡಿದೆ.

ಪುರಾತನ ಪ್ರಸಿದ್ಧಿಯಾಗಿರುವ ಚಾಮುಂಡಿಬೆಟ್ಟಕ್ಕೆ ಶತಮಾನ ಗಳ ಹಿಂದೆಯೇ ಎರಡು ಮೆಟ್ಟಿಲು ಮಾರ್ಗ ನಿರ್ಮಿಸಲಾಗಿದ್ದು, ಎರಡು ಮಾರ್ಗದಲ್ಲೂ ಭಕ್ತರು ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಬಂದು ನಾಡದೇವಿಯ ದರ್ಶನ ಪಡೆಯುತ್ತಿದ್ದರು. ಮೈಸೂರಿನ ಗೌರಿ ಶಂಕರನಗರ ಸಮೀಪ ಬೆಟ್ಟದ ತಪ್ಪಲಿನಲ್ಲಿ ರಾಜರ ಆಳ್ವಿಕೆ ಕಾಲದಲ್ಲೇ ನಿರ್ಮಿಸಿರುವ 1001 ಮೆಟ್ಟಿಲುಗಳ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಾಲ ಕಾಲಕ್ಕೆ ನಿರ್ವಹಣೆ ಮಾಡಿ ರುವುದರಿಂದ ಇಂದಿಗೂ ಆ ಮಾರ್ಗದ ಮೆಟ್ಟಿಲುಗಳು ಉತ್ತಮ ಸ್ಥಿತಿಯಲ್ಲಿದೆ. ಶ್ರೀ ಚಾಮುಂಡೇಶ್ವರಿ ಸಹೋದರಿಯಾಗಿರುವ ಉತ್ತನ ಹಳ್ಳಿಯ ಜ್ವಾಲಾಮುಖಿ ಶ್ರೀ ತ್ರಿಪುರಸುಂದರಿ ದೇವಿ ಕ್ಷೇತ್ರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಬೆಟ್ಟಕ್ಕೆ ಬರಲು ರಾಜರ ಕಾಲ ದಲ್ಲೇ ನಿರ್ಮಿಸಿದ್ದ ಮೆಟ್ಟಿಲು ಮಾರ್ಗಕ್ಕೆ ಅಳವಡಿಸಿದ್ದ ಕಲ್ಲುಗಳು ಹಲವೆಡೆ ಕಳಚಿಕೊಂಡಿದ್ದವು. ಅಲ್ಲದೆ ಗಿಡ, ಪೊದೆಗಳು ಮೆಟ್ಟಿಲು ಮಾರ್ಗಕ್ಕೆ ಚಾಚಿಕೊಂಡಿದ್ದರಿಂದ ಜನರು ಮೆಟ್ಟಿಲು ಮಾರ್ಗದಲ್ಲಿ ಬೆಟ್ಟವನ್ನು ಹತ್ತಲು ಹಿಂದೇಟು ಹಾಕಿದ್ದರು.

ಪುನರ್ ನಿರ್ಮಾಣಕ್ಕೆ ಕ್ರಮ: ಬಹುತೇಕ ಕುಸಿದು ಅಳಿವಿನಂಚಿ ನಲ್ಲಿದ್ದ ಉತ್ತನಹಳ್ಳಿ ಕಡೆಯ ಮೆಟ್ಟಿಲು ಮಾರ್ಗವನ್ನು ಪುನರ್ ನಿರ್ಮಿ ಸಲು ಚಾಮುಂಡೇಶ್ವರಿ ದೇವಾಲಯದ ಆಡಳಿತ ಮಂಡಳಿ ನಿರ್ಧ ರಿಸಿದೆ. ಈ ಹಿಂದೆ ಹಿರಿಯರು ಬೆಟ್ಟಕ್ಕೆ ಮಾಡಿದ್ದ ವ್ಯವಸ್ಥೆಯನ್ನು ಕಾಪಾಡಿಕೊಳ್ಳುವುದರೊಂದಿಗೆ ಪಾಳು ಬಿದ್ದ ಸ್ಥಿತಿಯಲ್ಲಿದ್ದ ಮೆಟ್ಟಿಲು ಮಾರ್ಗಕ್ಕೆ ಪುನಶ್ಚೇತನ ನೀಡಲು ಮುಂದಾಗಿದೆ. ಚಾಮುಂಡೇ ಶ್ವರಿ ದೇವಾಲಯದ ಆಡಳಿತ ಮಂಡಳಿ ಕೋರಿಕೆ ಮೇರೆಗೆ ಕಳೆದ ಒಂದು ವಾರದಿಂದ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಎನ್.ರಘು ನೇತೃತ್ವದ ತಂಡದಿಂದ ಸರ್ವೆ ಮಾಡಲಾಗಿದೆ. ಉತ್ತನಹಳ್ಳಿ ರಿಂಗ್ ರಸ್ತೆ ಜಂಕ್ಷನ್‍ನಿಂದ ಚಾಮುಂಡಿಬೆಟ್ಟದ ಮೇಲಿರುವ ನಾಯಕರ ಬೀದಿ ಮಾರ್ಗವಾಗಿ ಮಹಾಬಲೇಶ್ವರ ದೇವಾಲಯದ ಸಮೀಪದವರೆಗೆ ಸರ್ವೆ ಮಾಡಲಾಗಿದೆ.
99.50 ಲಕ್ಷ ರೂ. ಅಂದಾಜು ವೆಚ್ಚ: ದೇವಾಲಯ ಆಡಳಿತ ಮಂಡಳಿ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಕಾಮಗಾರಿಗೆ ಪ್ರಸ್ತಾವನೆ ಕಳುಹಿಸುವಂತೆ ಕೋರಿದ ಮೇರೆಗೆ ಲೋಕೋಪಯೋಗಿ ಇಲಾಖೆ ಸ್ಥಳೀಯವಾಗಿ ಸಿಗುವ ಕಲ್ಲನ್ನು ಬಳಕೆ ಮಾಡಲು ನಿರ್ಧರಿಸಿದೆ. ಸ್ಥಳೀಯವಾಗಿ ಸಿಗುವ ಕಲ್ಲನ್ನು(ಪಿಎಸ್ ಸ್ಲಾಬ್) ಕೂಡ ಬಳಸಲಾಗುತ್ತಿದೆ. ಪಿಎಸ್ ಸ್ಲಾಬ್‍ನ ಡ್ರೆಸ್ಡ್ ಮಾಡಿ ಅಳವಡಿಸುವುದರಿಂದ ಪಾರಂಪರಿಕತೆ ಬಿಂಬಿಸುತ್ತದೆ. ಅಲ್ಲದೆ ರಾಜರ ಕಾಲದಲ್ಲಿ ನಿರ್ಮಿಸಿದಂತೆ ಕಾಣುವುದರಿಂದ ಪಿಎಸ್ ಸ್ಲಾಬ್ ಅನ್ನು ಬಳಸಲಾಗುತ್ತಿದೆ. ಇದರಿಂದ ಉತ್ತನಹಳ್ಳಿ ಕಡೆ ಬೆಟ್ಟದ ತಪ್ಪಲಿನಿಂದ ಬೆಟ್ಟದ ದೇವಾ ಲಯದವರೆಗೂ ಕಲ್ಲು ಮೆಟ್ಟಿಲು ಮಾರ್ಗ ನಿರ್ಮಾಣಕ್ಕೆ 99.50 ಲಕ್ಷ ರೂ. ವೆಚ್ಚವಾಗ ಲಿದೆ ಎಂದು ಅಂದಾಜುಪಟ್ಟಿ ತಯಾರಿಸಿ, ಜಿಲ್ಲಾಡಳಿತಕ್ಕೆ ಕಳುಹಿಸಲಾಗಿದೆ.
1034 ಮೆಟ್ಟಿಲು ನಿರ್ಮಾಣ: ಹಾಲಿ ಸುತ್ತೂರು ಶಾಖಾ ಮಠದ ಕಡೆ ಇರುವ ಮೆಟ್ಟಿಲು ಮಾರ್ಗದಲ್ಲಿ 1001 ಮೆಟ್ಟಿಲುಗಳಿದ್ದರೆ, ಉತ್ತನಹಳ್ಳಿ ಕಡೆಯಿಂದ ಮರು ನಿರ್ಮಾಣವಾಗು ತ್ತಿರುವ ಮಾರ್ಗದಲ್ಲಿ 1034 ಮೆಟ್ಟಿಲುಗಳಿರುತ್ತವೆ. ಬೆಟ್ಟದ ತಪ್ಪಲಿನಿಂದ ಬೆಟ್ಟದವರೆಗೆ ಮೊದಲ ಹಂತದಲ್ಲಿ 625 ಮೀಟರ್ ಉದ್ದ, 155 ಮೀಟರ್ ಎತ್ತರದ ಕಾಮಗಾರಿ ನಡೆಯಲಿದೆ. ಮೈಸೂರು ಭಾಗದ ಮೆಟ್ಟಿಲು ಮಾರ್ಗದಲ್ಲಿ 6, 8, 10 ಇಂಚು ಎತ್ತರದ ಕಲ್ಲನ್ನು ಮೆಟ್ಟಿಲಾಗಿ ಬಳಸಲಾಗಿದೆ. ಇದರಿಂದ ವಯಸ್ಸಾದವರಿಗೆ ಕೆಲವೆಡೆ ಮೆಟ್ಟಿಲು ಹತ್ತಲಾಗದೆ ಪರದಾಡು ವಂತಹ ಸ್ಥಿತಿ ನಿರ್ಮಾಣವಾಗಿದೆ. ಆದರೆ ಪುನರ್ ನಿರ್ಮಾಣ ಮಾಡುತ್ತಿರುವ ಮಾರ್ಗ ದಲ್ಲಿ ಎಲ್ಲಾ ಮೆಟ್ಟಿಲುಗಳಿಗೂ 6 ಇಂಚು ಎತ್ತರದ ಕಲ್ಲನ್ನೇ ಬಳಸಲು ನಿರ್ಧರಿಸಲಾಗಿದೆ. ಅಲ್ಲದೆ ಎರಡು ಬದಿಯಲ್ಲೂ ರೇಲಿಂಗ್ಸ್ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ಮಾರ್ಗ ಮದ್ಯೆ ವಿದ್ಯುತ್ ದೀಪದ ವ್ಯವಸ್ಥೆಯೂ ಮಾಡಲು ಚಿಂತಿಸಲಾಗಿದೆ. ಮುಂಜಾನೆ ಹಾಗೂ ಸಂಜೆ ವೇಳೆ ವಾಯುವಿಹಾರಿಗಳು ಮೆಟ್ಟಿಲು ಮಾರ್ಗದಲ್ಲಿ ಬರುವುದರಿಂದ ಭದ್ರತೆಗಾಗಿ ಪರಿಸರಕ್ಕೆ ದಕ್ಕೆಯಾಗದಂತೆ ಸಣ್ಣ ಪ್ರಮಾಣದಲ್ಲಿ ಬೆಳಕು ಚೆಲ್ಲುವ ವಿದ್ಯುತ್ ಬಲ್ಬ್ ಬಳಸಬಹುದೇ ತಜ್ಞರ ಅಭಿಪ್ರಾಯಪಡೆಯಲು ಉದ್ದೇಶಿಸಲಾಗಿದೆ.

ಎಂ.ಟಿ.ಯೋಗೇಶ್ ಕುಮಾರ್