ವಿಧಾನ ಪರಿಷತ್ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಬೆಂಬಲಿಸಲು  ಸಂಸದ ಧ್ರುವನಾರಾಯಣ ಮನವಿ

ಮೈಸೂರು: ಈ ಹಿಂದೆ ರಾಜ್ಯದಲ್ಲಿ ಅಸ್ಥಿತ್ವದಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಿಂದ ಶಿಕ್ಷಕರಿಗೆ ಬಡ್ತಿ ಮೀಸಲಾತಿ ಸೇರಿದಂತೆ ಶಿಕ್ಷಕ ಸಮುದಾಯ ಎದುರಿಸುತ್ತಿದ್ದ ಹಲವಾರು ಸಮಸ್ಯೆಗಳಿಗೆ ಹೋರಾಟ ಮಾಡಿ ಪರಿಹಾರ ಒದಗಿಸಿಕೊಟ್ಟಿರುವ ಕಾಂಗ್ರೆಸ್ ಮುಖಂಡ ಎಂ.ಲಕ್ಷ್ಮಣ್ ಅವರಿಗೆ ದಕ್ಷಿಣ ಶಿಕ್ಷಕರ ಕ್ಷೇತ್ರದ ಮತದಾರರು ಬೆಂಬಲ ನೀಡುವಂತೆ ಸಂಸದ ಆರ್.ಧ್ರುವನಾರಾಯಣ್ ಮನವಿ ಮಾಡಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಎಂ.ಲಕ್ಷ್ಮಣ್ ಅವರು ಕಳೆದ ಐದಾರು ವರ್ಷಗಳಿಂದ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ. ಈ ಹಿಂದೆ ಕಾಂಗ್ರೆಸ್ ಸರ್ಕಾರದ ಮೇಲೆ ಒತ್ತಡವನ್ನೇರಿ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಡುವುದರಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಕುಮಾರ ನಾಯಕ್ ವರದಿ ಅನುಷ್ಠಾನಗೊಳಿಸಲು, ಶಿಕ್ಷಕರಿಗೆ ಹೆಚ್ಚುವರಿ ವೇತನ, ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅನುದಾನಿತ ಶಾಲಾ, ಕಾಲೇಜುಗಳ ಶಿಕ್ಷಕರಿಗೆ ಆರೋಗ್ಯ ವಿಮೆ ಮಾಡಿಸುವುದಕ್ಕೆ ಶ್ರಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜೂನ್.8ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಎಂ.ಲಕ್ಷ್ಮಣ್ ಅವರಿಗೆ ಬೆಂಬಲ ನೀಡುವಂತೆ ಕೋರಿದರು.

ಉತ್ತಮ ಆಡಳಿತ ನೀಡಿದ್ದರೂ ಸೋಲು ನೋವುಂಟು ಮಾಡಿದೆ: ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಕಳೆದ ಐದು ವರ್ಷಗಳಲ್ಲಿ ಯಾವುದೇ ಭ್ರಷ್ಟಾಚಾರದ ಕಳಂಕವಿಲ್ಲದೆ ಉತ್ತಮ ಆಡಳಿತ ನೀಡಿದರೂ ಸೋಲನನುಭವಿಸಿರುವುದು ನೋವುಂಟು ಮಾಡಿದೆ. ಸಾಲಮನ್ನಾ, ಅನ್ನಭಾಗ್ಯ, ಕ್ಷೀರ ಭಾಗ್ಯ, ವಿದ್ಯಾರ್ಥಿನಿಯರಿಗೆ ಲ್ಯಾಪ್‍ಟಾಪ್, ಉಚಿತ ಬಸ್‍ಪಾಸ್ ಸೇರಿದಂತೆ ಹಲವು ಜನಪ್ರಿಯ ಯೋಜನೆಗಳನ್ನು ನೀಡಿದ್ದರೂ ಸಿದ್ದರಾಮಯ್ಯ ಅವರಿಗೆ ಚಾಮುಂಡೇಶ್ವರಿ ಕ್ಷೇತ್ರದ ಮತದಾರರು ಮಾತ್ರ ಕೈಹಿಡಿಯದೆ ಇರುವುದು ಅತೀವ ನೋವುಂಟು ಮಾಡಿದೆ. ಸ್ವತಃ ಸಿದ್ದರಾಮಯ್ಯ ಅವರೇ ನೋವನ್ನು ತೋಡಿಕೊಂಡಿದ್ದಾರೆ ಎಂದು ಅವರು ಹೇಳಿದರು.

ಬಹುತೇಕ ರಸ್ತೆಗಳ ಅಭಿವೃದ್ಧಿ: ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಬಹುತೇಕ ರಸ್ತೆಗಳು ಅಭಿವೃದ್ಧಿಯಾಗಿವೆ. ಚಾಮರಾಜನಗರ ಜಿಲ್ಲೆಯಲ್ಲಿ 419 ಕೋಟಿ ರೂಗಳ ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿ ಪೂರ್ಣಗೊಂಡಿದೆ. 1,300 ಕೋಟಿ ರೂ.ಗಳ ಕಾಮಗಾರಿಯೂ ಈಗಾಗಲೇ ಆರಂಭಗೊಂಡಿದೆ. ರಾಜ್ಯದಲ್ಲಿಯೇ ಅತೀ ಹೆಚ್ಚು ರಾಷ್ಟ್ರೀಯ ಹೆದ್ದಾರಿಗಳ ಯೋಜನೆಯು ಕ್ಷೇತ್ರದಲ್ಲಿ ನಡೆದಿದೆ. ಇದರಿಂದ ಜನತೆಗೆ ಸಮಾಧಾನ ತಂದಿದೆ. ಅಲ್ಲದೇ ಬೆಂಗಳೂರು-ಮಳವಳ್ಳಿ-ಕೊಳ್ಳೇಗಾಲ- ಚಾಮರಾಜನಗರದ ರೈಲ್ವೆ ಯೋಜನೆಗೆ ಮಾಜಿ ರೈಲ್ವೆ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು 1330 ಕೋಟಿ ರೂ.ಗಳ ಅನುದಾನ ಮಂಜೂರು ಮಾಡಿದ್ದರು. ಆದರೆ ರಾಜ್ಯದ ಪಾಲನ್ನು ಸರ್ಕಾರ ನೀಡಲು ಸಾಧ್ಯವಾಗದೆ ಯೋಜನೆ ಕುಂಠಿತವಾಗಿದೆ ಎಂದು ವಿಷಾಧಿಸಿದರು.

ಸಿದ್ದರಾಮಯ್ಯ ಪ್ರವಾಸ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಜೂ.7ರಿಂದ 11ರವರೆಗೆ ಬಾದಾಮಿ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡು ಅಲ್ಲಿನ ಜನತೆಗೆ ಕೃತಜ್ಞತೆ ಸಲ್ಲಿಸಲಿದ್ದಾರೆ. ಜೂ.12ರಂದು ಮೈಸೂರಿನ ಕುವೆಂಪುನಗರದಲ್ಲಿರುವ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ವರುಣಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಕ್ಷೇತ್ರದಲ್ಲಿ ಕೃತಜ್ಞತಾ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮುಂದಿನ ದಿನಗಳಲ್ಲಿ ಚಾಮುಂಡೇಶ್ವರಿ ಕ್ಷೇತ್ರಕ್ಕೂ ಭೇಟಿ ನೀಡಲಿದ್ದಾರೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ವಕ್ತಾರ ಹೆಚ್.ಎ. ವೆಂಕಟೇಶ್, ಮೈಸೂರು ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ ಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಕಾಂಗ್ರೆಸ್ ಮುಖಂಡ ಮೈಸೂರು ಬಸವಣ್ಣ ಇದ್ದರು.