ಬೆಂಗಳೂರು, ಜೂ.18-ವಿಧಾನಸಭೆ ಯಿಂದ ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಘೋಷಣೆಯಾಗುತ್ತಿದ್ದಂತೆಯೇ ಬಿಜೆಪಿಯಲ್ಲಿ ಮತ್ತೆ ಭಿನ್ನಮತ ಸ್ಫೋಟ ಗೊಂಡಿದೆ. ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಗುರುವಾರ ಸಂಜೆ ಭೇಟಿ ಮಾಡಿದ ಶಾಸಕ ಬಸವರಾಜ ಪಾಟೀಲ್ ಯತ್ನಾಳ್ ನೇತೃತ್ವದ 10ಕ್ಕೂ ಹೆಚ್ಚು ಉತ್ತರ ಕರ್ನಾಟಕ ಭಾಗದ ಶಾಸಕರು ಮುಖ್ಯ ಮಂತ್ರಿ ಯಡಿಯೂರಪ್ಪ ಅವರ ಮೇಲೆ ಆರೋಪಗಳ ಸುರಿಮಳೆಗೈದಿದ್ದಾರೆ ಎಂದು ಹೇಳಲಾಗಿದೆ. ನಾವು ಆಡಳಿತ ಪಕ್ಷದಲ್ಲಿದ್ದರೂ ನಮಗೆ ಮುಖ್ಯಮಂತ್ರಿಗಳು ಸ್ಪಂದಿಸುತ್ತಿಲ್ಲ. ನಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೆಲಸಗಳೇ ನಡೆ ಯುತ್ತಿಲ್ಲ. ಶಿವಮೊಗ್ಗ ಜಿಲ್ಲೆಗೆ ಮಾತ್ರ ಅನು ದಾನ ಬಿಡುಗಡೆಯಾಗುತ್ತಿದೆಯೇ ಹೊರತು, ನಮಗೆ ಅನುದಾನ ಬಿಡುಗಡೆಯಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾವು ಜನರಿಗೆ ಹ್ಯಾಗೆ ಉತ್ತರ ಹೇಳುವುದು ಎಂದು ಅಸಮಾಧಾನಿತ ಶಾಸಕರು ಪ್ರಶ್ನಿಸಿದ್ದಾರೆ. ವಿಭಾಗಾವಾರು ಸಭೆ ಕರೆದು ಶಾಸಕರ ಸಮಸ್ಯೆ ಆಲಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಕುರಿತು ತಾವು ಮುಖ್ಯ ಮಂತ್ರಿಗಳ ಜೊತೆ ಮಾತನಾಡುವುದಾಗಿಯೂ, ಅಗತ್ಯ ಬಿದ್ದರೆ ಪಕ್ಷದ ವರಿಷ್ಠರ ಗಮನಕ್ಕೆ ತರುವುದಾಗಿಯೂ ನಳಿನ್ ಕುಮಾರ್ ಕಟೀಲ್ ಶಾಸಕರಿಗೆ ಭರವಸೆ ನೀಡಿದ್ದಾರೆ.
ಸಂಪುಟ ವಿಸ್ತರಣೆಗೆ ಪಟ್ಟು: ಮತ್ತೊಂದೆಡೆ ಶಾಸಕರ ಎರಡು ಗುಂಪುಗಳು ಸಂಪುಟ ವಿಸ್ತರಣೆಗೆ ಪಟ್ಟು ಹಿಡಿದಿವೆ ಎಂಬ ಮಾತು ಗಳು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿವೆ. ಆಷಾಢ ಮುಗಿದ ತಕ್ಷಣ ಸಂಪುಟ ವಿಸ್ತರಣೆ ಮಾಡಬೇಕು ಎಂದು ಎರಡೂ ಗುಂಪುಗಳು ಆಗ್ರಹಿಸಿದ್ದು, ಎಂ.ಟಿ.ಬಿ. ನಾಗರಾಜ್ ಮತ್ತು ಆರ್.ಶಂಕರ್ ಅವರನ್ನು ಸಂಪುಟಕ್ಕೆ ಸೇರಿಸಿ ಕೊಳ್ಳಬೇಕು ಎಂದು ಒಂದು ಗುಂಪು ಮುಖ್ಯ ಮಂತ್ರಿಗಳಿಗೆ ಒತ್ತಡ ಹೇರಿದರೆ, ಮತ್ತೊಂದು ಗುಂಪು ಮೂಲ ಬಿಜೆಪಿ ಶಾಸಕರಿಗೆ ಸಂಪುಟ ದಲ್ಲಿ ಸ್ಥಾನ ಕಲ್ಪಿಸುವಂತೆ ಒತ್ತಾಯಿಸುತ್ತಿದೆ ಎಂದು ಮೂಲಗಳು ತಿಳಿಸಿವೆ