ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ 7 ವರ್ಷ ಪೂರ್ಣಗೊಂಡ ಹಿನ್ನೆಲೆ ಬಿಜೆಪಿಯಿಂದ ಕಷಾಯ, ಮಾಸ್ಕ್, ಸ್ಯಾನಿಟೈಸರ್ ವಿತರಣೆ

ಮೈಸೂರು, ಮೇ 30(ಆರ್‍ಕೆಬಿ)- ಮೊದಲ ಮತ್ತು ಎರಡನೇ ಅವಧಿ ಸೇರಿ ಪ್ರಧಾನಿ ನರೇಂದ್ರ ಮೋದಿ ಸರ್ಕಾ ರಕ್ಕೆ 7 ವರ್ಷ ಪೂರ್ಣಗೊಳಿಸಿದ ಸಂಭ್ರಮದ ಹಿನ್ನೆಲೆ ಯಲ್ಲಿ ಬಿಜೆಪಿ ನಗರ ಘಟಕದ ವತಿಯಿಂದ ಪ್ರತಿ ಬೂತ್ ಮಟ್ಟದಲ್ಲಿ ಕಷಾಯ, ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಣಾ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಚಾಲನೆ ನೀಡಿದರು.

ಬಿಜೆಪಿ ಕಚೇರಿಯಲ್ಲಿ ಭಾನುವಾರ ಕಷಾಯ, ಮಾಸ್ಕ್ ಮತ್ತು ಸ್ಯಾನಿಟೈಸರ್‍ಗಳನ್ನು ಬಿಡುಗಡೆ ಮಾಡಿದ ಬಳಿಕ ಬಿಜೆಪಿ ಕಚೇರಿಯ ಅಕ್ಕ-ಪಕ್ಕದ ಮನೆಗಳಿಗೆ ಕಷಾಯ, ಮಾಸ್ಕ್ ಮತ್ತು ಸ್ಯಾನಿಟೈಸರ್‍ಗಳನ್ನು ವಿತರಿಸಿದರು.

ನರೇಂದ್ರ ಮೋದಿ ಸರ್ಕಾರಕ್ಕೆ 7 ವರ್ಷ ತುಂಬಿದ ಸಂದರ್ಭದಲ್ಲಿ ನಗರ ಬಿಜೆಪಿ ಹಮ್ಮಿಕೊಂಡಿರುವ ಸೇವಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರತಿಯೊಬ್ಬರೂ ಈ ಸೇವಾ ಕಾರ್ಯದಲ್ಲಿ ಪಾಲ್ಗೊಳ್ಳುವ ಮೂಲಕ ಮೋದಿ ಸರ್ಕಾರದ ಕಾರ್ಯಕ್ರಮಗಳನ್ನು ಮನೆ ಮನೆಗೆ ತಲುಪಿ ಸುವಂತೆ ಪಕ್ಷದ ಮುಖಂಡರಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ, ನಗರದಲ್ಲಿ ಒಟ್ಟು 854 ಬೂತ್‍ಗಳಿದ್ದು, 300ಕ್ಕೂ ಹೆಚ್ಚು ಕಾರ್ಯಕರ್ತರು ತಮ್ಮ ಮನೆಗಳ ಅಕ್ಕಪಕ್ಕದ ರಸ್ತೆಗಳಲ್ಲಿರುವ ಮನೆಗಳಿಗೆ ಕಷಾಯ, ಗಿಡ ಮತ್ತು ಆಹಾರದ ಪದಾರ್ಥಗಳನ್ನು ವಿತರಿಸುವ ಮೂಲಕ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.

ಸಂಸದ ಪ್ರತಾಪ್‍ಸಿಂಹ ಅವರು 7 ಆಕ್ಸಿಜನ್ ಕಾನ್ಸನ್ ಟ್ರೇಟರ್‍ಗಳನ್ನು ಬಿಜೆಪಿ ಕಚೇರಿಗೆ ನೀಡಿದ್ದು, ಇದಕ್ಕಾಗಿ 7 ಮಂದಿಗೆ ಕಾನ್ಸನ್‍ಟ್ರೇಟರ್ ಬಳಕೆ ವಿಧಾನದ ಬಗ್ಗೆ ತರಬೇತಿ ನೀಡಿ ಅದರ ಜವಾಬ್ದಾರಿಯನ್ನೂ ನೀಡಲಾಗಿದೆ. ಆಕ್ಸಿಜನ್ ಅಗತ್ಯವಿರುವ ಬಗ್ಗೆ ಯಾರಿಂದ ಬೇಡಿಕೆ ಬರು ತ್ತದೆಯೋ ಅಂಥವರಿಗೆ 3000 ರೂ. ಠೇವಣಿ ಇರಿಸಿ ಕೊಂಡು ಕಾನ್ಸನ್‍ಟ್ರೇಟರ್ ನೀಡಲಾಗುತ್ತದೆ. ನಂತರ ಠೇವಣಿ ಹಣವನ್ನು ಅವರಿಗೇ ಹಿಂತಿರುಗಿಸಲಾಗುವುದು. ಜೊತೆಗೆ ಬಳಸಲಾದ ನಾಸಲ್ ಪೈಪ್ ಅನ್ನು ಅವರಿಗೇ ನೀಡಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಸದ ಪ್ರತಾಪ್‍ಸಿಂಹ, ಶಾಸಕ ರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಹೇಮಂತ್‍ಕುಮಾರ್ ಗೌಡ, ಜಂಗಲ್ ಲಾಡ್ಜಸ್ ಅಂಡ್ ರೆಸಾಟ್ರ್ಸ್ ಅಧ್ಯಕ್ಷ ಎಂ. ಅಪ್ಪಣ್ಣ, ಮೈಲ್ಯಾಕ್ ಅಧ್ಯಕ್ಷ ಎನ್.ವಿ.ಫಣೀಶ್, ಪಕ್ಷದ ನಗರ ಪ್ರಧಾನ ಕಾರ್ಯದರ್ಶಿಗಳಾದ ಸೋಮಸುಂದರ್, ಹೆಚ್.ಜಿ. ಗಿರಿಧರ್, ವಾಣೀಶ್‍ಕುಮಾರ್ ಇನ್ನಿತರರು ಉಪಸ್ಥಿತರಿದ್ದರು.