ಅಶಕ್ತರಿಗೆ ದಿನಸಿ ಕಿಟ್ ವಿತರಣೆ

ಮೈಸೂರು, ಜೂ.20(ಆರ್‍ಕೆಬಿ)- ಇಂದು ಪ್ರಕೃತಿ ಮುನಿದಿದ್ದಾಳೆ. ಕೊರೊನಾ ಸೋಂಕಿನ ಕಾರಣದಿಂದಾಗಿ ಸುತ್ತಮುತ್ತ ಇರುವ ಬಂಧು-ಬಾಂಧವರನ್ನು ನೋಡ ನೋಡುವಷ್ಟರಲ್ಲಿ ಕಳೆದುಕೊಳ್ಳುತ್ತಿದ್ದೇವೆ. ನಮ್ಮ ಬದುಕು ಎಷ್ಟು ಅಶಾಶ್ವತ ಎಂಬುದು ಇದರಿಂದ ತಿಳಿಯುತ್ತಿದೆ. ಹೀಗಾಗಿ ನಾವು ಮನುಷ್ಯತ್ವವನ್ನು ಅರಿತುಕೊಳ್ಳಬೇಕು ಎಂದು ಮೈಸೂರಿನ ಕುಂದೂರು ಮಠದ ಡಾ.ಶರತ್‍ಚಂದ್ರ ಸ್ವಾಮೀಜಿ ತಿಳಿಸಿದರು.

ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಪೂರ್ವಾಶ್ರಮದ ಮಾತೃಶ್ರೀ ದಿ.ಶಿವನಾಗಮ್ಮ ಅವರಿಗೆ ನುಡಿ ನಮನ ಹಾಗೂ ಅವರ ಸ್ಮರಣಾರ್ಥ ಸಂಕಷ್ಟಕ್ಕೆ ಒಳಗಾದ ವೃದ್ಧಾಶ್ರಮಗಳ ವೃದ್ಧರಿಗೆ ಹಾಗೂ ಪೌರಕಾಮಿರ್ಕರಿಗೆ ದಿನಸಿ ಕಿಟ್‍ಗಳ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮುನಿದಿರುವ ಪ್ರಕೃತಿ ನಮಗೆ ಪಾಠ ಕಲಿಸುತ್ತಿದೆ. ಮನುಷ್ಯತ್ವದಿಂದ ಬದುಕುವುದನ್ನು ಕಲಿಯುವಂತೆ ಪ್ರೇರೇಪಿಸುತ್ತಿದೆ. ಬದುಕು ಶಾಶ್ವತ ಎಂದು ಬದುಕಿದರೆ ನಮ್ಮಿಂದಾದ ಒಂದಷ್ಟು ಕೆಲಸ ಮಾಡೋಣ ಎನಿಸಬೇಕು. ನಮ್ಮ ಬದುಕು ಎಷ್ಟು ಅವಶ್ಯ ಎಂಬುದು ಇದರಿಂದ ತಿಳಿದುಬರುತ್ತದೆ. ಅಂತಹ ಕೆಲಸವನ್ನು ದಿ.ಶಿವನಾಗಮ್ಮ ಮಾಡಿದ್ದಾರೆ. ಅವರ ಮಕ್ಕಳು ಇಂದು ಅಕ್ಷರ, ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕೊರೊನಾ ಲಾಕ್‍ಡೌನ್ ಸಂಕಷ್ಟಕ್ಕೆ ಒಳಗಾದ ವೃದ್ಧಾಶ್ರಮಗಳ ವೃದ್ಧರಿಗೆ ಹಾಗೂ ಪೌರಕಾರ್ಮಿಕರಿಗೆ ದಿನಸಿ ಕಿಟ್‍ಗಳನ್ನು ವಿತರಿಸಲಾಯಿತು. ಕಾರ್ಯಕ್ರಮ ದಲ್ಲಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು, ಭಾರತೀಯ ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಡಾ.ಸಿ.ವೆಂಕಟೇಶ್, ವಿದ್ವತ್ ಇನೋ ವೇಟಿವ್ ಸಲ್ಯೂಷನ್ ಸಂಸ್ಥೆಯ ರೋಹಿತ್ ಪಾಟೀಲ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮೈಸೂರು ಜಿಲ್ಲಾ ಉಪಾಧ್ಯಕ್ಷ ಕೆ.ಬಿ.ಸೋಮೇಗೌಡ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಮಾಲಂಗಿ ಸುರೇಶ್, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಎಸ್.ಶಿವಮೂರ್ತಿ ಕಾನ್ಯ, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಂ.ಚಂದ್ರಶೇಖರ್, ಮುಖಂಡರಾದ ಮೂಗೂರು ನಂಜುಂಡಸ್ವಾಮಿ, ವಿನೋದ್‍ರಾಜ್ ಇತರರು ಉಪಸ್ಥಿತರಿದ್ದರು.