ಕೊರೊನಾ ಶಂಕಿತ ಕುಟುಂಬದವರಿಗೆ ಅಗತ್ಯ ವಸ್ತು ನೀಡಲು ಅಡ್ಡಿಪಡಿಸಬೇಡಿ

ಬನ್ನೂರಿನಲ್ಲಿ ಸಾರ್ವಜನಿಕರಿಗೆ ಎಸ್ಪಿ ರಿಷ್ಯಂತ್ ತಾಕೀತು

ಮೈಸೂರು, ಏ.6(ಆರ್‍ಕೆ)- ಕೊರೊನಾ ಶಂಕಿತರು ಹಾಗೂ ಸೋಂಕಿತರ ಕುಟುಂಬ ದವರಿಗೆ ಅಗತ್ಯ ಪಡಿತರ, ದಿನಸಿ ಪೂರೈಸಲು ಅಡ್ಡಿಪಡಿಸಬೇಡಿ ಎಂದು ಎಸ್ಪಿ ಸಿ.ಬಿ.ರಿಷ್ಯಂತ್ ಬನ್ನೂರಿನಲ್ಲಿ ಸಾರ್ವಜನಿಕರಿಗೆ ತಾಕೀತು ಮಾಡಿದ್ದಾರೆ.

ಸೋಮವಾರ ಬನ್ನೂರಿನಲ್ಲಿ ಧ್ವನಿವರ್ಧಕದ ಮೂಲಕ ಈ ಸೂಚನೆ ನೀಡಿದ ಅವರು, ಸರ್ಕಾರದಿಂದ ಕೊರೊನಾ ಸೋಂಕಿತ ಕುಟುಂಬ ದವರಿಗೆ ನ್ಯಾಯಬೆಲೆ ಅಂಗಡಿ ಮೂಲಕ ಪಡಿತರ ಹಾಗೂ ದಿನಸಿ ವಿತರಿಸಲು ಕೆಲವರು ಅಡ್ಡಿಪಡಿಸುತ್ತಿರುವುದಲ್ಲದೇ, ಹಾಲು, ಹಣ್ಣು, ತರಕಾರಿ, ಔಷಧಿ ಖರೀದಿಸಲು ಅವಕಾಶ ನೀಡುತ್ತಿಲ್ಲ ಎಂಬ ದೂರು ಗಳು ಬಂದಿವೆ ಎಂದರು.

ಕೊರೊನಾ ಶಂಕಿತರು ಹಾಗೂ ಸೋಂಕಿತರಿಗೆ ಜಿಲ್ಲಾಡಳಿತ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಿ ಇತರರಿಗೆ ಸೋಂಕು ಹರಡದಂತೆ ಎಚ್ಚರ ವಹಿಸುತ್ತಿದೆ. ಅವರೂ ಸಹ ಎಲ್ಲರಂತೆ ಬದುಕಲು ಅವಕಾಶ ನೀಡುವುದು ನಮ್ಮ ಜವಾಬ್ದಾರಿ ಯಾಗಿರು ವುದರಿಂದ ಅಗತ್ಯ ಜೀವನೋಪಾಯ ವಸ್ತುಗಳನ್ನು ಪಡೆಯಲು ತೊಂದರೆ ನೀಡಬಾರದು. ಒಂದು ವೇಳೆ ಅಡ್ಡಿಪಡಿಸುವುದು ಕಂಡುಬಂದರೆ ಅಂತಹವರ ವಿರುದ್ಧ ಪೊಲೀಸ್ ಇಲಾಖೆಯು ಕಾನೂನು ರೀತಿ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಸ್‍ಪಿ ರಿಷ್ಯಂತ್ ಸಾರ್ವಜನಿಕರಿಗೆ ಬಹಿರಂಗ ಎಚ್ಚರಿಕೆ ನೀಡಿದ್ದಾರೆ.