ಮಾ.31ರಿಂದ ಬಿಜೆಪಿ ವಿರುದ್ಧ `ದೋಸ್ತಿ’ ರಣಕಹಳೆ

ಬೆಂಗಳೂರು: ಲೋಕಸಭಾ ಚುನಾ ವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಿ, ಹೆಚ್ಚು ಸ್ಥಾನ ಗಳಿಸಲು ಮೈತ್ರಿ ಪಕ್ಷದ ನಾಯಕರು ಇಂದಿಲ್ಲಿ ಏಕತೆ ಪ್ರದರ್ಶಿಸಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿಯವರನ್ನು ಪ್ರಧಾನಿಯನ್ನಾಗಿ ಮಾಡಲು ರಾಜ್ಯದಲ್ಲಿ ಬಿಜೆಪಿ ಪಕ್ಷಕ್ಕೆ ಎರಡು ಅಂಕಿ ದಾಟದಂತೆ ನೋಡಿಕೊಳ್ಳಲು ನಾಯಕರು ತೀರ್ಮಾನ ಕೈಗೊಂಡಿದ್ದಾರೆ.

ಉಭಯ ಪಕ್ಷಗಳಲ್ಲಿರುವ ಮನ ಸ್ತಾಪಗಳನ್ನು ಬದಿಗಿರಿಸಿ, ಚುನಾವಣೆಯನ್ನು ಒಂದಾಗಿ ಎದುರಿಸಬೇಕೆಂಬ ರಾಹುಲ್‍ಗಾಂಧಿ ಅವರ ಸಲಹೆ ಮೇರೆಗೆ ಇಂದು ಖಾಸಗಿ ಹೋಟೆಲ್‍ನಲ್ಲಿ ಸುಮಾರು ನಾಲ್ಕು ತಾಸಿಗೂ ಹೆಚ್ಚು ಸುದೀರ್ಘ ಸಭೆ ನಡೆಸಿದ ನಂತರ ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ಲೋಕಸಭಾ ಚುನಾವಣಾ ಅಭ್ಯರ್ಥಿ ಗಳ ಪರ ಜಂಟಿಯಾಗಿ ಪ್ರಚಾರ ಕೈಗೊಳ್ಳುವುದು ಮತ್ತು ಸ್ಥಳೀಯವಾಗಿರುವ ಭಿನ್ನಾಭಿಪ್ರಾಯ ಬಗೆಹರಿಸಲು ವೀಕ್ಷಕರ ನೇಮಕ ಮಾಡುವ ತೀರ್ಮಾನಕ್ಕೆ ಬಂದಿದ್ದಾರೆ.

ಸಭೆಯ ನಂತರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇ ಗೌಡ, ಸಿಎಲ್‍ಪಿ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದ ರಾಮಯ್ಯ, ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಮತ್ತಿತರರು ನಮ್ಮಲ್ಲಿರುವ ಸಣ್ಣ ಭಿನ್ನಾಭಿಪ್ರಾಯ ಬದಿಗಿರಿಸಿ, 28ರಲ್ಲಿ 28ನ್ನೂ ಗೆಲ್ಲಲು ಜಂಟಿ ಹೋರಾಟ ನಡೆಸುವು ದಾಗಿ ತಿಳಿಸಿದರು. ಕರ್ನಾಟಕದಿಂದಲೇ ರಾಷ್ಟ್ರಕ್ಕೆ ಸಂದೇಶ ನೀಡುವ ಉದ್ದೇಶದಿಂದ ಮಾರ್ಚ್ 31ರಂದು ಬೆಂಗ ಳೂರು, ಮೈಸೂರು ಹೀಗೆ ಯಾವುದಾದರೂ ಒಂದು ಭಾಗದಲ್ಲಿ ಬೃಹತ್ ಸಮಾವೇಶ ನಡೆಸಲಿದ್ದು, ಈ ಸಮಾ ವೇಶದಲ್ಲೇ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ, ಬಿಜೆಪಿ ವಿರುದ್ಧ ರಣಕಹಳೆ ಮೊಳಗಿಸಲಿದ್ದಾರೆ ಎಂದರು.

ಈ ಸಮಾವೇಶದ ನಂತರ ಉಭಯ ಪಕ್ಷದ ಮುಖಂಡರು ಜಂಟಿಯಾಗಿ ಚುನಾವಣೆ ಪ್ರಚಾರ ಕೈಗೊಳ್ಳುತ್ತೇವೆ. ಮೊದಲು ಹಳೇ ಮೈಸೂರು ಭಾಗದಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಈ ಭಾಗದ ಕ್ಷೇತ್ರಗಳಲ್ಲಿ ಪ್ರಚಾರ ಮಾಡಿ, ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಮತದಾರರ ಮನಮುಟ್ಟುತ್ತೇವೆ. ಮೈಸೂರು, ಮಂಡ್ಯ ಎಂಬ ಭೇದ ನಮ್ಮಲ್ಲಿಲ್ಲ. ಸ್ಥಳೀಯವಾಗಿ ಏನೇ ಸಮಸ್ಯೆಗಳಿದ್ದರೂ, ಅದನ್ನು ಬಗೆಹರಿಸಿಕೊಳ್ಳಬೇಕು. ಒಂದು ವೇಳೆ ಸಾಧ್ಯ ವಾಗದಿದ್ದರೆ, ರಾಜ್ಯ ನಾಯಕರೊಟ್ಟಿಗೆ ಸಮಾಲೋಚಿಸಿ, ಬಗೆಹರಿಸಿಕೊಂಡು ನಮ್ಮ ಅಭ್ಯರ್ಥಿಗಳ ಪರ ಚುನಾವಣಾ ಕಣಕ್ಕಿಳಿಯಬೇಕು. ಎಲ್ಲಿ ಮನಸ್ತಾಪವಿದೆಯೋ ಅಂತಹ ಕಡೆ ಉಭಯ ಪಕ್ಷವು ನೇಮಿಸುವ ವೀಕ್ಷಕರು ಭೇಟಿ ನೀಡಿ, ಅವರ ಮನ ವೊಲಿಸಲಿದ್ದಾರೆ ಎಂದರು. ಅಲ್ಲದೆ ದಿನನಿತ್ಯದ ಆಗುಹೋಗುಗಳನ್ನು ಮಧ್ಯಮಗಳಿಗೆ ತಿಳಿಸಲು ಉಭಯ ಪಕ್ಷ ಒಟ್ಟಾಗಿ ವಕ್ತಾರರನ್ನು ನೇಮಕ ಮಾಡಲಿವೆ ಎಂದರು.

ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವುದೇ ನಮ್ಮ ಮುಖ್ಯ ಗುರಿ. ಆ ನಿಟ್ಟಿನಲ್ಲಿ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದೇವೆ. ಎರಡು ಮೂರು ದಿನಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಪಟ್ಟಿಯನ್ನು ಜಂಟಿಯಾಗಿ ಬಿಡುಗಡೆ ಮಾಡಿ, ಮಾರ್ಚ್ 31ರಿಂದ ಬಿಜೆಪಿಯ ವಿರುದ್ಧ ರಣಕಹಳೆ ಮೊಳಗಿಸುತ್ತೇವೆ. ಸ್ಥಳೀಯ ಭಿನ್ನಾಭಿಪ್ರಾಯ ವನ್ನು ಈಗಾಗಲೇ ಕೆಲವು ಕಡೆ ಶಮನ ಮಾಡಿದ್ದೇವೆ. ಪ್ರತಿ ಜಿಲ್ಲೆಗೂ ಎರಡೂ ಪಕ್ಷಗಳಿಂದ ವೀಕ್ಷಕರನ್ನು ನೇಮಕ ಮಾಡುತ್ತೇವೆ. ಮೈಸೂರು,ಮಂಡ್ಯ ಬಿಕ್ಕಟ್ಟನ್ನು ನಾವು ಸರಿಪಡಿಸುತ್ತೇವೆ ಎಂದರು. ಪ್ರಧಾನಿ ನರೇಂದ್ರಮೋದಿಯವರು ಮಹಾಘಟ್ ಬಂಧನ್ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ.ಆದರೆ ದೇಶದ ಹದಿನೈದು ರಾಜ್ಯಗಳಲ್ಲಿ ಬಿಜೆಪಿ, ಮೈತ್ರಿ ಪಕ್ಷಗಳ ಜತೆಗೂಡಿ ಅಧಿಕಾರ ನಡೆಸುತ್ತಿದೆ ಎಂದು ಇದೇ ಸಂದರ್ಭದಲ್ಲಿ ದೇವೇಗೌಡರು ವ್ಯಂಗ್ಯವಾಡಿದರು. ಇಷ್ಟಾದರೂ ಅವರು ಮಹಾಘಟ್‍ಬಂಧನ್ ಕುರಿತು ಬಳಕೆ ಮಾಡಿದ ಶಬ್ದಪ್ರಯೋಗ ಸರಿಯಿಲ್ಲ ಎಂದ ಅವರು, ಇಂತಹ ಮಾತನಾಡಿದ ಮೋದಿಯವರಿಗೆ ತಕ್ಕ ಉತ್ತರ ನೀಡಬೇಕಿದೆ. ಹೀಗಾಗಿ ಕರ್ನಾಟಕದಲ್ಲಿ ಮಾರ್ಚ್ 31ರಂದು ರಾಹುಲ್‍ಗಾಂಧಿ ಅವರ ನೇತೃತ್ವದಲ್ಲಿ ಬೃಹತ್ ಸಮಾವೇಶ ನಡೆಸುತ್ತೇವೆ. ಉಭಯ ಪಕ್ಷಗಳು ಒಗ್ಗೂಡಿ ಬಿಜೆಪಿಯನ್ನು ಎದುರಿಸುತ್ತೇವೆ ಎಂದು ವಿವರಿಸಿದರು.