ಡಾ.ತಿಮ್ಮಯ್ಯ ನಾಮಪತ್ರ ಅಂಗೀಕಾರ

ಮೈಸೂರು,ನ.25(ಆರ್‍ಕೆಬಿ)-ಮೈಸೂರು-ಚಾಮ ರಾಜನಗರ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‍ಗೆ ನಡೆಯಲಿರುವ ಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಡಾ.ಡಿ.ತಿಮ್ಮಯ್ಯ ಅವರ ನಾಮ ಪತ್ರ ಗುರುವಾರ ಅಂಗೀಕಾರವಾಯಿತು.

ತಿಮ್ಮಯ್ಯ ಅವರ ನಾಮಪತ್ರಕ್ಕೆ ಬಿಜೆಪಿ ಸಲ್ಲಿಸಿದ್ದ ಆಕ್ಷೇ ಪಣೆಗಳನ್ನು ತಳ್ಳಿಹಾಕಿದ ಚುನಾವಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರು, ತಿಮ್ಮಯ್ಯ ಅವರ ನಾಮಪತ್ರ ಕ್ರಮಬದ್ಧವಾಗಿದೆ ಎಂದು ಘೋಷಿಸಿದರು. ತಮ್ಮ ನಾಮಪತ್ರದ ಜೊತೆ ಸಲ್ಲಿಸಿದ್ದ ಪ್ರಮಾಣ ಪತ್ರಗಳಲ್ಲಿನ ಲೋಪಗಳನ್ನು ಎತ್ತಿಹಿಡಿದು ಬಿಜೆಪಿ ಸಲ್ಲಿಸಿದ್ದ ಆಕ್ಷೇಪಣೆಗಳಿಂದಾಗಿ ಕಳೆದ ಎರಡು ದಿನಗಳಿಂದ ಆತಂಕದಲ್ಲಿದ್ದ ಡಾ.ಡಿ.ತಿಮ್ಮಯ್ಯ ನಿಟ್ಟುಸಿರು ಬಿಟ್ಟಿದ್ದಾರೆ. ಬುಧವಾರ ನಾಮಪತ್ರಗಳ ಪರಿಶೀಲನೆ ವೇಳೆ ಬಿಜೆಪಿ ಅಭ್ಯರ್ಥಿ ಆರ್.ರಘು ಕೌಟಿಲ್ಯ ಪರ ವಕೀಲ ಶೇಷಗಿರಿರಾವ್ ಅವರು, ತಿಮ್ಮಯ್ಯ ಅವರ ಪ್ರಮಾಣ ಪತ್ರದಲ್ಲಿನ ಲೋಪದೋಷಗಳ ಬಗ್ಗೆ ಮೂರು ಆಕ್ಷೇಪಣೆ ಗಳನ್ನು ಸಲ್ಲಿಸಿದ್ದರು. ಇದೇ ವೇಳೆ ಜೆಡಿಎಸ್ ಅಭ್ಯರ್ಥಿ ಸಿ.ಎನ್. ಮಂಜೇಗೌಡ ನಾಮಪತ್ರಕ್ಕೂ ಬಿಜೆಪಿಯಿಂದ ಆಕ್ಷೇಪಣೆ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಬುಧವಾರ ರಾತ್ರಿವರೆಗೂ ವಾದ-ಪ್ರತಿವಾದಗಳನ್ನು ಆಲಿಸಿ, ಜೆಡಿಎಸ್ ಅಭ್ಯರ್ಥಿ ಸಿ.ಎನ್.ಮಂಜೇಗೌಡ ನಾಮಪತ್ರ ವನ್ನು ಪುರಸ್ಕರಿಸಿ, ತಿಮ್ಮಯ್ಯ ಅವರ ನಾಮಪತ್ರಕ್ಕೆ ಸಲ್ಲಿಸಿದ್ದ ಆಕ್ಷೇ ಪಣೆಗಳ ಬಗ್ಗೆ ಗುರುವಾರ ಬೆಳಗ್ಗೆ ವಾದ ಮಂಡಿಸಲು ತಿಮ್ಮಯ್ಯ ನವರಿಗೆ ಅವಕಾಶ ಕಲ್ಪಿಸಿದ್ದರು. ಈ ವೇಳೆ ಹೊಸದಾಗಿ ಪ್ರಮಾಣಪತ್ರ ಸಲ್ಲಿಸಲು ತಿಮ್ಮಯ್ಯ ಪರವಾಗಿ ಕೋರಲಾಯಿ ತಾದರೂ, ಅದನ್ನು ಜಿಲ್ಲಾಧಿಕಾರಿಗಳು ನಿರಾಕರಿಸಿದ್ದರು. ಇಂದು ಕಾಂಗ್ರೆಸ್ ಅಭ್ಯರ್ಥಿ ಡಾ.ಡಿ.ತಿಮ್ಮಯ್ಯ ಪರ ವಾದಿಸಲು ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷರೂ ಆದ ಹಿರಿಯ ವಕೀಲ ಎ.ಎಸ್.ಪೊನ್ನಣ್ಣ ಆಗಮಿಸಿದ್ದರು. ತಿಮ್ಮಯ್ಯ ಅವರ ಪ್ರಮಾಣಪತ್ರದಲ್ಲಿ ಅವರ ಪತ್ನಿಗೆ ಪಾನ್‍ಕಾರ್ಡ್ ಇದೆಯೇ? ಎಂಬ ಕಾಲಂನಲ್ಲಿ ‘ಇಲ್ಲ’ ಎಂದು ನಮೂದಿಸಲಾಗಿದೆ. ಅದು ಸರಿಯಲ್ಲ. ಅಲ್ಲಿ ‘ಪಾನ್ ಸಂಖ್ಯೆ ಸ್ವೀಕೃತವಾಗಿಲ್ಲ’ ಎಂದು ನಮೂದಿಸಬೇಕಾಗಿತ್ತು ಎಂಬುದು ಬಿಜೆಪಿಯ ಮೊದಲನೇ ಆಕ್ಷೇಪಣೆಯಾದರೆ, ಸ್ಥಿರಾಸ್ತಿ ಎಂಬ ಕಾಲಂನಲ್ಲಿ ‘ಇಲ್ಲ’ ಎಂದು ನಮೂದಿಸಲಾಗಿದೆ. ಆದರೆ, ಸ್ಥಿರಾಸ್ತಿಯು ಪಿತ್ರಾರ್ಜಿತವೇ? ಅಥವಾ ಸ್ವಯಾರ್ಜಿತವೇ? ಎಂಬ ಕಾಲಂ ಅನ್ನು ಖಾಲಿ ಬಿಡಲಾಗಿದೆ ಎಂಬುದು ಎರಡನೇ ಆಕ್ಷೇಪವಾಗಿತ್ತು. ಪ್ರಮಾಣಪತ್ರದ 26ಎ ಫಾರಂನಲ್ಲಿ ತಿಮ್ಮಯ್ಯ ಅವರ ಪತ್ನಿ ಮೀರಾಬಾಯಿ ಅವರಿಗೆ ಸಾಲವಿದೆಯೇ? ಎಂಬ ಕಾಲಂನಲ್ಲಿ ‘ಇಲ್ಲ’ ಎಂದು ನಮೂದಿಸಿದ್ದರೆ, 26ಬಿ ಫಾರಂನಲ್ಲಿ ಸಾಲ ಇರುವುದಾಗಿ ನಮೂದಿಸಲಾಗಿದೆ ಎಂಬುದು ಮೂರನೇ ಆಕ್ಷೇಪಣೆ.

ಈ ಆಕ್ಷೇಪಣೆಗಳ ಬಗ್ಗೆ ವಾದ ಮಂಡಿಸಿದ ಎ.ಎಸ್. ಪೊನ್ನಣ್ಣ, ಪಾನ್‍ಕಾರ್ಡ್ ಇಲ್ಲ ಅಂದರೆ ಸಂಖ್ಯೆ ಸ್ವೀಕೃತವಾಗಿಲ್ಲ ಎಂದೇ ಅರ್ಥವಾಗುತ್ತದೆ. ಇಲ್ಲಿ ಇದೇ ಪದವನ್ನು ಉಪಯೋಗಿಸ ಬೇಕು ಎಂಬುದು ಸರಿಯಲ್ಲ ಎಂದರು. ಸ್ಥಿರಾಸ್ತಿ ಇಲ್ಲ ಅಂದಮೇಲೆ ಅದು ಪಿತ್ರಾರ್ಜಿತವೇ, ಸ್ವಯಾರ್ಜಿತವೇ ಎಂಬ ಪ್ರಶ್ನೆಯೇ ಉದ್ಭವವಾಗುವುದಿಲ್ಲ. ಹೀಗಿರುವಾಗ ಆ ಕಾಲಂ ಅನ್ನು ಭರ್ತಿ ಮಾಡಬೇಕು ಎಂಬುದು ಅತ್ಯಾವಶ್ಯಕವಲ್ಲ ಎಂದು ವಿವರಿಸಿದರು. ಮೂರನೇ ಆಕ್ಷೇಪಣೆ ಬಗ್ಗೆ ವಾದಿಸಿದ ಅವರು, ತಿಮ್ಮಯ್ಯ ಅವರ ಪತ್ನಿಗೆ ಸಾಲ ಇಲ್ಲ ಎಂಬುದೇ ಸರಿ. ಆದರೆ, ಒಂದು ಫಾರ್ಮೆಟ್ ಅನ್ನು ಭರ್ತಿ ಮಾಡುವಾಗ ಟೈಪಿಂಗ್ ಮಿಸ್ಟೇಕ್‍ನಿಂದಾಗಿ ಸಾಲವಿದೆಯೇ? ಎಂಬ ಕಾಲಂನಲ್ಲಿ ಅಂಕಿಗಳು ಬಂದಿವೆ. ಅದೇನೂ ದೊಡ್ಡ ಲೋಪವೇನಲ್ಲ. ಹೀಗಾಗಿ ನಾಮಪತ್ರವನ್ನು ಅಂಗೀಕರಿಸಬೇಕು ಎಂದು ವಾದಿಸಿದರು.

ತಿಮ್ಮಯ್ಯ ಅವರ ಪತ್ನಿ ಮೀರಾಬಾಯಿ ಅವರಿಗೆ ಸಾಲ ಇದೆ ಹಾಗೂ ಇಲ್ಲ ಎಂದು ತದ್ವಿರುದ್ಧವಾಗಿ ಪ್ರಮಾಣಪತ್ರದಲ್ಲಿ ತಿಳಿಸಿರುವುದರಿಂದ ಅದರಲ್ಲಿ ಯಾವುದು ನಿಜ ಎಂಬುದು ಗೊತ್ತಾಗಬೇಕಾಗಿದೆ. ಸಾರ್ವಜನಿಕರಿಗೆ ಅಭ್ಯರ್ಥಿಯ ಸಂಪೂರ್ಣ ಮಾಹಿತಿ ನೀಡಬೇಕೆಂಬ ಉದ್ದೇಶದಿಂದ ಯಾವುದು ನಿಜ ಎಂಬುದು ಸ್ಪಷ್ಟವಾಗಿ ತಿಳಿಸಬೇಕಾಗಿದೆ ಎಂದು ರಘು ಕೌಟಿಲ್ಯ ಪರ ವಕೀಲ ಶೇಷಗಿರಿರಾವ್ ವಾದಿಸಿದಾಗ, ಪ್ರತಿವಾದ ಮಂಡಿಸಿದ ಎ.ಎಸ್. ಪೊನ್ನಣ್ಣ, ಮೀರಾಬಾಯಿ ಅವರಿಗೆ ಸಾಲವೇ ಇಲ್ಲ. ಅದರೂ ಇದೆ ಎಂದು ಹೇಳಿದಾಗ ಅದು ನಮಗೆ ಸ್ವಲ್ಪ ಹಿನ್ನಡೆಯೇ. ಆದರೆ, ಆ ವಿಚಾರದ ಬಗ್ಗೆ ತನಿಖೆ ನಡೆಸುವುದಕ್ಕಾಗಲೀ ಅಥವಾ ಪರಿಶೀಲನೆ ನಡೆಸುವುದಕ್ಕಾಗಲೀ ಇದು ಸರಿಯಾದ ಸಮಯವಲ್ಲ. ಅಲ್ಲದೇ, ಅದು ಚುನಾವಣಾಧಿಕಾರಿಗಳ ಕೆಲಸವೂ ಅಲ್ಲ ಎಂದು ಸುಪ್ರೀಂಕೋರ್ಟ್‍ನ ತೀರ್ಪುಗಳನ್ನು ಉಲ್ಲೇಖಿಸಿ ವಾದಿಸಿದರು. ವಾದ-ಪ್ರತಿವಾದಗಳನ್ನು ಆಲಿಸಿದ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಮಧ್ಯಾಹ್ನ 2 ಗಂಟೆಗೆ ತಿಮ್ಮಯ್ಯ ಅವರ ನಾಮಪತ್ರ ಕ್ರಮಬದ್ಧವಾಗಿದೆ ಎಂದು ಪ್ರಕಟಿಸಿದರು.