ಡ್ರಗ್ಸ್ ಪ್ರಕರಣ: ನಟಿ ರಾಗಿಣಿಗೆ ಸುಪ್ರೀಂಕೋರ್ಟ್‍ನಿಂದ ಕಡೆಗೂ ಸಿಕ್ತು ಜಾಮೀನು!

ನವದೆಹಲಿ: ಮಾದಕ ವಸ್ತು ಜಾಲದ ನಂಟು ಹೊಂದಿರುವ ಆರೋಪದ ಮೇಲೆ ಜೈಲುಪಾಲಾಗಿದ್ದ ಖ್ಯಾತ ನಟಿ ರಾಗಿಣಿ ದ್ವಿವೇದಿ ಅವರಿಗೆ ಸುಪ್ರೀಂ ಕೋರ್ಟ್‍ನಲ್ಲಿ ಜಾಮೀನು ಮಂಜೂರಾಗಿದೆ. ಆ ಮೂಲಕ ಅವರಿಗೆ ಕೊಂಚ ರಿಲೀಫ್ ಸಿಕ್ಕಂತಾಗಿದೆ.

ಕಳೆದ ನಾಲ್ಕೂವರೆ ತಿಂಗಳಿನಿಂದ ಜೈಲುವಾಸ ಅನುಭವಿಸುತ್ತಿದ್ದ ನಟಿ ರಾಗಿಣಿ ದ್ವಿವೇದಿ ಅವರಿಗೆ ಸುಪ್ರೀಂಕೋರ್ಟ್ ಗುರುವಾರ (ಜ.21) ಜಾಮೀನು ನೀಡಿದೆ. 2020ರ ಸೆ.14ರಂದು ರಾಗಿಣಿ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಲಾಗಿತ್ತು. ನವೆಂಬರ್‍ನಲ್ಲಿ ಕರ್ನಾಟಕ ಹೈಕೋರ್ಟ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಅದನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಸುಮಾರು 140 ದಿನಗಳನ್ನು ರಾಗಿಣಿ ದ್ವಿವೇದಿ ಜೈಲಿನಲ್ಲಿ ಕಳೆದಿದ್ದಾರೆ. ಈ ಹಿಂದೆ ಹಲವು ಬಾರಿ ಅವರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರೂ ಕೂಡ ಜಾಮೀನು ಸಿಕ್ಕಿರಲಿಲ್ಲ. ಅವರು ಬಂಧನಕ್ಕೆ ಒಳಗಾದ ದಿನದಿಂ ದಲೂ ಅವರ ಪಾಲಕರು ಮಗಳಿಗೆ ಜಾಮೀನು ಕೊಡಿಸಲು ಹರಸಾಹಸ ಪಡುತ್ತಿ ದ್ದರು. ಅದಕ್ಕಾಗಿ ಮನೆ ಮತ್ತು ಕಾರನ್ನು ಮಾರುವ ಹಂತಕ್ಕೂ ಅವರು ಹೋಗಿದ್ದರು.

ಡ್ರಗ್ಸ್ ಜಾಲದ ಜೊತೆ ನಂಟು ಹೊಂದಿರುವ ಆರೋಪದಲ್ಲಿ ರಾಗಿಣಿ ಮನೆಯ ಮೇಲೆ ಸೆ.4ರಂದು ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಬಳಿಕ ಅವರನ್ನು ಚಾಮರಾಜಪೇಟೆಯ ಸಿಸಿಬಿ ಕಚೇರಿಗೆ ಕರೆದುಕೊಂಡು ಬಂದು ವಿಚಾರಣೆ ನಡೆಸಲಾಗಿತ್ತು. ರಾಗಿಣಿ ವಿರುದ್ಧ ಕೆಲವು ಸಾಕ್ಷಿಗಳು ಸಿಕ್ಕಿದ್ದರಿಂದ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಬಳಿಕ ಅವರನ್ನು ಪರಪ್ಪನ ಆಗ್ರಹಾರಕ್ಕೆ ಕಳಿಸಲಾಯಿತು. ನಂತರ ನಟಿ ಸಂಜನಾ ಗಲ್ರಾನಿ ಕೂಡ ಸಿಸಿಬಿ ಬಲೆಗೆ ಬಿದ್ದಿದ್ದರು. ಈಗಾಗಲೇ ಸಂಜನಾ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಮಾದಕ ವಸ್ತು ಜಾಲಕ್ಕೆ ಸಂಬಂಧಿಸಿದಂತೆ ಕನ್ನಡ ಚಿತ್ರರಂಗದ ಅನೇಕರನ್ನು ಸಿಸಿಬಿ ಅಧಿಕಾರಿಗಳು ವಿಚಾರಣೆಗೆ ಒಳಪಡಿ ಸಿದ್ದರು. ಐಂದ್ರಿತಾ ರೇ, ದಿಗಂತ್ ಮಂಚಾಲೆ, ಸಂತೋಷ್ ಆರ್ಯನ್, ಅಕುಲ್ ಬಾಲಾಜಿ, ಅನುಶ್ರೀ ಮತ್ತು ಅನೇಕ ಕಿರುತೆರೆ ಕಲಾವಿದರನ್ನೂ ವಿಚಾರಣೆಗೆ ಕರೆಯ ಲಾಗಿತ್ತು. ಈ ಪ್ರಕರಣದ ಪ್ರಮುಖ ಆರೋಪಿ ಆಗಿರುವ ಆದಿತ್ಯ ಆಳ್ವಾ ಹಲವು ದಿನಗಳ ಕಾಲ ತಲೆಮರೆಸಿಕೊಂಡಿದ್ದ. ಆತನನ್ನೂ ಜ.11ರಂದು ಬಂಧಿಸಲಾಗಿತ್ತು.