ದಸರಾ: ಮೈಸೂರು ಮೃಗಾಲಯಕ್ಕೆ 2,46,485 ಮಂದಿ ಭೇಟಿ

ಮೈಸೂರು, ಅ.9(ಪಿಎಂ)- ಈ ಬಾರಿಯ ದಸರಾ ಯಶಸ್ವಿಯಾಗಿ ಇತಿಹಾಸ ಸೃಷ್ಟಿಸಿದ್ದು, ವಿಜೃಂಭಣೆಯ ದಸರಾ ಹಿನ್ನೆಲೆಯಲ್ಲಿ ಮೈಸೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದಾರೆ. ಮೈಸೂರು ಮೃಗಾಲಯಕ್ಕೆ ಸೆ.26ರಿಂದ ಅ.8ರವರೆಗೆ 2,46,485 ಮಂದಿ ಭೇಟಿ ನೀಡಿದ್ದರೆ, ಇದೇ ಅವಧಿಯಲ್ಲಿ ಕಾರಂಜಿ ಕೆರೆಗೆ 1 ಲಕ್ಷ ಮಂದಿ ಭೇಟಿ ನೀಡಿ ದ್ದಾರೆ ಎಂದು ಕರ್ನಾಟಕ ಮೃಗಾಲಯ ಪ್ರಾಧಿ ಕಾರದ ಅಧ್ಯಕ್ಷ ಶಿವಕುಮಾರ್ ತಿಳಿಸಿದರು.

ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೃಗಾಲಯ ಮತ್ತು ಕಾರಂಜಿ ಕೆರೆಗೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ವೀಕ್ಷಕರು ಭೇಟಿ ನೀಡಿರುವುದು ನಿಜಕ್ಕೂ ದಾಖಲೆಯಾಗಿದೆ. ಇಡೀ ಮೈಸೂರಿನಲ್ಲಿ ಈಗ ಪ್ರವಾಸಿಗರ ಸಂಖ್ಯೆ ತುಂಬಿ ತುಳುಕುತ್ತಿದ್ದು, ಇದಕ್ಕೆಲ್ಲಾ ಕಾರಣ ಈ ಬಾರಿಯ ವಿಜೃಂಭಣೆಯ ದಸರಾ ಆಚರಣೆಯಾಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮ ಶೇಖರ್ ಅವರು ಮೈಸೂರಿನ ಎಲ್ಲಾ ಶಾಸಕರ ಸಹಕಾರದಿಂದ ಈ ಬಾರಿ ವಿಜೃಂಭಣೆಯ ದಸರಾ ನಡೆದು, ಇತಿಹಾಸ ಸೃಷ್ಟಿಸಿದೆ ಎಂದರೆ ಅತಿಶೋಯುಕ್ತಿಯಲ್ಲ. ಜಂಬೂ ಸವಾರಿ ಮೆರವಣಿಗೆಯನ್ನು 15 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ. ನಗರದ ಹೋಟೆಲ್ ಉದ್ಯಮ ದಸರಾ ಹಿನ್ನೆಲೆಯಲ್ಲಿ 200 ಕೋಟಿ ವಹಿವಾಟು ನಡೆಸಿದೆ. ಮಾತ್ರವಲ್ಲದೆ, ಇತರೆ ವಹಿವಾಟು ಕನಿಷ್ಠ 700ರಿಂದ 800 ಕೋಟಿ ರೂ.ವರೆಗೆ ನಡೆದಿದೆ ಎಂದು ತಿಳಿಸಿದರು.

ವಸ್ತು ಪ್ರದರ್ಶನದಲ್ಲಿ ಮೂಲಸೌಲಭ್ಯದ ಕೊರತೆ ಎದುರಾಗಿದೆ ಎಂಬುದರ ಬಗ್ಗೆ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೇ ಶ್ರೀನಿವಾಸಗೌಡ ಪ್ರತಿಕ್ರಿಯಿಸಿ, ಲಕ್ಷಾಂತರ ಮಂದಿ ಭೇಟಿ ನೀಡಿದಾಗ ಸಣ್ಣಪುಟ್ಟ ಸಮಸ್ಯೆಗಳು ಸಾಮಾನ್ಯ. ನಿನ್ನೆಯೇ ಸಣ್ಣಪುಟ್ಟ ಸಮಸ್ಯೆಗಳನ್ನು ಸರಿಪಡಿಸಲಾಗಿದೆ. ಶೌಚಾಲಯಗಳನ್ನು ಹೆಚ್ಚಳ ಮಾಡಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆಯೂ ಸಮರ್ಪಕವಾಗಿದೆ. ಪ್ರತಿನಿತ್ಯ 40ರಿಂದ 50 ಸಾವಿರ ಮಂದಿ ವಸ್ತು ಪ್ರದರ್ಶನಕ್ಕೆ ಭೇಟಿ ನೀಡು ತ್ತಿದ್ದಾರೆ ಎಂದು ತಿಳಿಸಿದರು. ಬಿಜೆಪಿ ಮುಖಂಡರಾದ ಮಹೇಶ್ ರಾಜ್‍ಅರಸ್, ಕೇಬಲ್ ಮಹೇಶ್ ಗೋಷ್ಠಿಯಲ್ಲಿದ್ದರು.