ಶ್ರೀನಗರ, ಅ.27- ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಹೊರ ರಾಜ್ಯದವರು ಭೂಮಿ ಖರೀದಿಸಲು ಅನುವಾಗುವಂತೆ ಹಲವು ಕಾನೂನುಗಳ ತಿದ್ದುಪಡಿಯನ್ನು ಕೇಂದ್ರ ಸರ್ಕಾರ ತಂದಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡ ಲಾಗಿದ್ದ ವಿಶೇಷಾಧಿಕಾರ ರದ್ದುಗೊಳಿಸಿ ವರ್ಷ ಕಳೆದ ಬಳಿಕ ಈ ತಿದ್ದುಪಡಿಗಳನ್ನು ತರಲಾಗಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಭೂಮಿ ಖರೀದಿಸಲು ಇರುವ, ಜಮ್ಮು ಮತ್ತು ಕಾಶ್ಮೀರ ಅಭಿವೃದ್ಧಿ ಕಾಯ್ದೆಯ ಸೆಕ್ಷನ್ 17ರಿಂದ `ರಾಜ್ಯದ ಶಾಶ್ವತ ನಿವಾಸಿ’ ಎನ್ನುವು ದನ್ನು ಕೈಬಿಡಲಾಗಿದೆ. ವಿಶೇಷಾಧಿಕಾರ ರದ್ದುಗೊಳಿಸುವ ಮೊದಲು, ಜಮ್ಮು ಮತ್ತು ಕಾಶ್ಮೀರದ ನಿವಾಸಿಗಳಾಗಿರದವರು ಈ ಭಾಗದಲ್ಲಿ ಸ್ಥಿರಾಸ್ತಿಯನ್ನು ಖರೀದಿಸಲು ಸಾಧ್ಯವಾಗುತ್ತಿರಲಿಲ್ಲ. ಈ ತಿದ್ದುಪಡಿ ಯಿಂದಾಗಿ ಹೊರ ರಾಜ್ಯದವರಿಗೂ ಭೂಮಿ ಖರೀದಿಗೆ ಅವಕಾಶ ದೊರೆಯಲಿದೆ. ಕಾಯ್ದೆಯಲ್ಲಿ ಹಲವು ವಿನಾಯಿತಿಗಳಿದ್ದು, ಕೃಷಿ ಭೂಮಿಯನ್ನು ಶಿಕ್ಷಣ ಸಂಸ್ಥೆ, ಆಸ್ಪತ್ರೆ ಸೇರಿದಂತೆ ಕೃಷಿಯೇತರ ಚಟುವಟಿಕೆಗಳಿಗೂ ವರ್ಗಾಯಿಸಬಹುದಾಗಿದೆ ಎಂದು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ತಿಳಿಸಿದರು.