ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಇಬ್ಬರು ಮಹಿಳೆಯರ ಪ್ರವೇಶ

ತಿರುವನಂತಪುರ: ಸುಪ್ರೀಂಕೋರ್ಟ್ ಆದೇಶ ನೀಡಿದ ಬಳಿಕ ಇದೇ ಮೊದಲ ಬಾರಿಗೆ 50 ವರ್ಷದೊಳಗಿನ ಮಹಿಳೆಯರಿಬ್ಬರು ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯ ಪ್ರವೇಶಿಸಿದ ಹಿನ್ನೆಲೆಯಲ್ಲಿ ಪ್ರಸಿದ್ಧ ಪುಣ್ಯಕ್ಷೇತ್ರ ಶಬರಿಮಲೆ ಸೇರಿದಂತೆ ಕೇರಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ.

ಪ್ರತಿಭಟನೆ ಹತ್ತಿಕ್ಕಲು ಪೆÇಲೀಸರು ಸ್ಟನ್ ಗ್ರೆನೇಡ್ (ಭಾರೀ ಸದ್ದು, ಮಿಂಚಿನಂತಹ ಬೆಳಕಿನೊಂದಿಗೆ ಸ್ಫೋಟಿಸುವ ಆದರೆ, ಯಾವುದೇ ಹಾನಿ ಎಸಗದ ಗುಂಡು), ಅಶ್ರುವಾಯು ಪ್ರಯೋಗಿಸಿದ್ದಾರೆ. 44 ವರ್ಷದ ಬಿಂದು (ಕಾಲೇಜು ಉಪನ್ಯಾಸಕಿ ಹಾಗೂ ಸಿಪಿಐ(ಎಂ) ಕಾರ್ಯಕರ್ತೆ) ಹಾಗೂ 42 ವರ್ಷದ ಕನಕದುರ್ಗ (ನಾಗರಿಕ ಸರಬರಾಜು ಇಲಾಖೆಯಲ್ಲಿ ಉದ್ಯೋಗಿ) ಇಂದು ಮುಂಜಾನೆ 3.45ಕ್ಕೆ ಅಯ್ಯಪ್ಪಸ್ವಾಮಿ ದೇವಸ್ಥಾನ ಪ್ರವೇಶಿಸಿ ದರು. ಈ ಇಬ್ಬರು ಮಹಿಳೆಯರು ಸದ್ಯ ಈಗ ಎಲ್ಲಿದ್ದಾರೆ ಎಂಬುದು ತಿಳಿದು ಬಂದಿಲ್ಲ.

ಅವರನ್ನು ಸುರಕ್ಷಿತ ಸ್ಥಳದಲ್ಲಿ ಇರಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆದರೆ ಅಯ್ಯಪ್ಪ ಭಕ್ತರು ಈ ಮಹಿಳೆಯರ ಮನೆಗಳ ಮೇಲೆ ಕಲ್ಲು ತೂರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಿಳೆಯರ ಪ್ರವೇಶದಿಂದ ದೇವಾಲಯ ಅಪವಿತ್ರಗೊಂಡಿದೆ ಯೆಂದು, ದೇವಾಲಯವನ್ನು ಮುಚ್ಚಿ ಕಲಶ ಶುದ್ಧಿ ನಂತರ ಮತ್ತೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಆದರೆ ದೇಗುಲಕ್ಕೆ ಮಹಿಳೆಯರು ಪ್ರವೇಶಿಸಿದ್ದಕ್ಕೆ ಅಯ್ಯಪ್ಪ ಭಕ್ತರು, ವಿವಿಧ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಹಲವೆಡೆ ಘರ್ಷಣೆಗಳು ಏರ್ಪಟ್ಟಿವೆ. ಈ ನಡುವೆ ಕೆಲ ಸಂಘಟನೆಗಳು ಗುರುವಾರ ಕೇರಳ ಬಂದ್‍ಗೆ ಕರೆ ನೀಡಿವೆ. ಕೇರಳ ರಾಜಧಾನಿ ತಿರುವನಂತಪುರದಲ್ಲಿ ಬಿಜೆಪಿ ಹಾಗೂ ಸಿಪಿಎಂ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ.

ಈ ಇಬ್ಬರು ಮಹಿಳೆಯರು ಅಯ್ಯಪ್ಪಸ್ವಾಮಿ ದೇವಸ್ಥಾನ ಪ್ರವೇಶಿಸಿದ್ದನ್ನು ಕೇರಳ ಸಿಎಂ ಪಿಣರಾಯಿ ವಿಜಯನ್ ಖಚಿತಪಡಿಸಿದ್ದಾರೆ. ಈ ಇಬ್ಬರು ಮಹಿಳೆಯರು ಪೊಲೀಸ್ ಭದ್ರತೆಯಲ್ಲಿ ದೇವಾಲಯ ಪ್ರವೇಶಿಸಿದ್ದಾರೆ. ಅವರಿಗೆ ರಕ್ಷಣೆ ನೀಡಿದ್ದಕ್ಕೆ ನಮಗೆ ಹೆಮ್ಮೆ ಇದೆ ಎಂದು ಅವರು ತಿಳಿಸಿದ್ದಾರೆ. ಈ ನಡುವೆ ಹೇಳಿಕೆ ನೀಡಿರುವ ಸಿಪಿಐ ರಾಜ್ಯ ಕಾರ್ಯದರ್ಶಿ ಕೊಡಿಯೆರಿ ಬಾಲಕೃಷ್ಣನ್ ಅವರು, ದೇಗುಲದ ಬಾಗಿಲು ಮುಚ್ಚುವ ಮೂಲಕ ಅರ್ಚಕರು ಸಂವಿಧಾನ ಹಾಗೂ ಸುಪ್ರೀಂಕೋರ್ಟ್ ತೀರ್ಪನ್ನು ಉಲ್ಲಂಘನೆ ಮಾಡಿದ್ದಾರೆಂದು ಹೇಳಿದ್ದಾರೆ. ಮಹಿಳೆಯರಿಗೆ ಪ್ರವೇಶ ನೀಡಲು ಸರ್ಕಾರ ಹಾಗೂ ಪೆÇಲೀಸರು ಸಹಕಾರ ನೀಡಿರುವುದನ್ನು ಖಂಡಿಸಿ ಶಬರಿಮಲೆ ಕರ್ಮ ಸಮಿತಿ ಗುರುವಾರ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6ರವರೆಗೆ ಕೇರಳ ರಾಜ್ಯದಾದ್ಯಂತ ಹರತಾಳಕ್ಕೆ ಕರೆ ನೀಡಿದೆ.

ಮತ್ತೊಂದೆಡೆ ಬಿಜೆಪಿ ಕಾರ್ಯಕರ್ತರು ಬೀದಿಗಿಳಿದಿದ್ದು, ಭಾರೀ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯದೆಲ್ಲೆಡೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಮಧ್ಯರಾತ್ರಿ ಬೆಟ್ಟ ಹತ್ತಿ ಇಂದು ಬೆಳಗಿನ ಜಾವ 3.45ರ ಸುಮಾರಿಗೆ ಬಿಂದು ಹಾಗೂ ಕನಕದುರ್ಗಾ ದೇವಾಲಯ ಪ್ರವೇಶಿಸಿದ್ದರು.
ಈ ವೇಳೆ ಭಕ್ತ ಸಂಖ್ಯೆ ಕಡಿಮೆ ಇತ್ತು. ಮಾಧ್ಯಮದವರು ಇರಲಿಲ್ಲ. ಇವರು ಡಿ.18ರಂದು ಅಯ್ಯಪ್ಪಸ್ವಾಮಿ ದೇವಸ್ಥಾನ ಪ್ರವೇಶಿಸಲು ಯತ್ನಿಸಿ ವಿಫಲರಾಗಿದ್ದರು.

ಅಯ್ಯಪ್ಪ ದೇವಾಲಯ ಪ್ರವೇಶಕ್ಕೆ 10 ವರ್ಷದಿಂದ ಮೇಲ್ಪಟ್ಟು 50 ವರ್ಷದ ಒಳಗಿನ ಮಹಿಳೆಯರಿಗೆ ನಿರ್ಬಂಧ ವಿಧಿಸಲಾಗಿತ್ತು. ಆದರೆ ಸುಪ್ರೀಂಕೋರ್ಟ್ ಈ ನಿರ್ಬಂಧವನ್ನು ತೆರವುಗೊಳಿಸಿ ಎಲ್ಲ ವಯಸ್ಸಿನ ಮಹಿಳೆಯರು ದೇವಾಲಯವನ್ನು ಪ್ರವೇಶಿಸಬಹುದು ಎನ್ನುವ ಐತಿಹಾಸಿಕ ತೀರ್ಪನ್ನು ಪ್ರಕಟಿಸಿತ್ತು.