ಉಪನ್ಯಾಸಕರ ಬಹಿಷ್ಕಾರ: ವಿಭಾಗ ಮಟ್ಟದಲ್ಲಿ ಮೌಲ್ಯಮಾಪನಕ್ಕೆ ಆಗ್ರಹ

ಮೈಸೂರು, ಜೂ. 4 (ಆರ್‍ಕೆ)- ವಿಭಾಗ ಮಟ್ಟದಲ್ಲಿ ದ್ವಿತೀಯ ಪಿಯು ವಿಜ್ಞಾನ ವಿಷಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಲು ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿ ಉಪನ್ಯಾಸಕರು ಮೌಲ್ಯಮಾಪನ ಪ್ರಕ್ರಿಯೆ ಬಹಿಷ್ಕರಿಸಿದ್ದಾರೆ.

ಈ ಸಂಬಂಧ `ಮೈಸೂರು ಮಿತ್ರ’ ನೊಂದಿಗೆ ಮಾತನಾಡಿದ ಕರ್ನಾಟಕ ರಾಜ್ಯ ಪಿಯುಸಿ ಉಪನ್ಯಾಸಕರ ಸಂಘದ ಮೈಸೂರು ಜಿಲ್ಲಾಧ್ಯಕ್ಷ ಯೋಗಾನಂದ, ದ್ವಿತೀಯ ಪಿಯುಸಿ ಪರೀಕ್ಷಾ ಕಲಾ ಮತ್ತು ವಾಣಿಜ್ಯ ವಿಭಾಗದ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ರಾಜ್ಯದ ಎಲ್ಲಾ ವಿಭಾಗ ಮಟ್ಟದಲ್ಲಿ ನಡೆಯುತ್ತಿದೆ. ಆದರೆ ವಿಜ್ಞಾನ ವಿಷಯ ಪತ್ರಿಕೆಗಳನ್ನು ಮಾತ್ರ ಬೆಂಗಳೂರಿಗೆ ಸೀಮಿತಗೊಳಿಸಲಾಗಿದೆ ಎಂದು ತಿಳಿಸಿದರು.

ಕೊರೊನಾ ವೈರಸ್ ಹರಡುವ ಭೀತಿ ಇರುವ ಕಾರಣ ಹಾಗೂ ದೂರದ ಊರು ಗಳಿಂದ ಬೆಂಗಳೂರಿಗೆ ಹೋಗಿ ವಾರಗಟ್ಟಲೆ ಉಳಿಯಲು ಸೂಕ್ತ ವ್ಯವಸ್ಥೆಗಳಿಲ್ಲದಿರುವುದ ರಿಂದ ನಾವು ವಿಜ್ಞಾನ ವಿಷಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವನ್ನು ಬಹಿಷ್ಕರಿಸುತ್ತಿರುವುದಾಗಿ ತಿಳಿಸಿದ್ದಾರೆ.

ಸರ್ಕಾರ ನಮಗೆ ಬೆಂಗಳೂರಿಗೆ ಹೋಗಲು ಅಥವಾ ಅಲ್ಲಿ ವಾಸ್ತವ್ಯ ಹೂಡಲು ಸೂಕ್ತ ವ್ಯವಸ್ಥೆ ಮಾಡದೇ ಎಲ್ಲರೂ ಬೆಂಗ ಳೂರಿನಲ್ಲೇ ಬಂದು ಕೆಲಸ ಮಾಡಿ ಎಂಬುದು ಸರಿಯಲ್ಲ. ನಮಗೆ ಅನಾನು ಕೂಲವಾಗುವುದರಿಂದ ವಿಜ್ಞಾನ ವಿಭಾಗದ ಎಲ್ಲಾ ವಿಷಯಗಳ ಉಪನ್ಯಾಸಕರು ಮೌಲ್ಯಮಾಪನ ಬಹಿಷ್ಕರಿ ಸುತ್ತಿದ್ದೇವೆ ಎಂದು ಯೋಗಾನಂದ ತಿಳಿಸಿದರು.

ವಿಭಾಗ ಮಟ್ಟದಲ್ಲಿ ಅವಕಾಶ ಕಲ್ಪಿಸು ವವರೆಗೆ ಉಪನ್ಯಾಸಕರು ತಮ್ಮ ನಿಲುವು ಬದಲಿಸುವುದಿಲ್ಲ. ಒಂದು ವೇಳೆ ಬೆಂಗ ಳೂರಿನವರು ಮೌಲ್ಯಮಾಪನ ಕಾರ್ಯಕ್ಕೆ ಹಾಜರಾದರೆ ನಾವ್ಯಾರೂ ಅಡ್ಡಿಪಡಿ ಸುವುದಿಲ್ಲ ಎಂದು ತಿಳಿಸಿದರು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪದವಿ ಪೂರ್ವ ಮತ್ತು ವೃತ್ತಿ ಶಿಕ್ಷಣ ಉಪ ನಿರ್ದೇ ಶಕಿ ಜಿ.ಆರ್.ಗೀತಾ ಅವರು, ಬೆಂಗಳೂರಿ ನಲ್ಲಿ ಮೌಲ್ಯಮಾಪನ ಮಾಡಲು ವಿಜ್ಞಾನ ಉಪನ್ಯಾಸಕರು ನಿರಾಕರಿಸಿ, ಜಿಲ್ಲಾ ಅಥವಾ ವಿಭಾಗ ಮಟ್ಟದಲ್ಲಿ ಅವಕಾಶ ಕಲ್ಪಿಸಿ ಎಂದು ಮನವಿ ಪತ್ರ ಕೊಟ್ಟಿದ್ದಾರೆ. ನಾವು ಅದನ್ನು ಸರ್ಕಾರಕ್ಕೆ ಕಳುಹಿಸಿದ್ದೇವೆ. ಪದವಿ ಪೂರ್ವ ಪರೀಕ್ಷಾ ಮಂಡಳಿ ನಿರ್ಧಾರ ಕೈಗೊಳ್ಳ ಬೇಕಿದೆ. ಜೂನ್ 6 ಅಥವಾ 7 ರಿಂದ ವಿಜ್ಞಾನ ವಿಭಾಗದ ವಿಷಯಗಳ ಉತ್ತರ ಪತ್ರಿಕೆ ಮೌಲ್ಯಮಾಪನ ಆರಂಭವಾಗ ಲಿದ್ದು, ಅಲ್ಲಿಯವರೆಗೆ ಸರ್ಕಾರದಿಂದ ಯಾವ ನಿರ್ದೇಶನ ಬರುತ್ತದೆ ಎಂಬುದನ್ನು ನೋಡಬೇಕಿದೆ ಎಂದು ತಿಳಿಸಿದರು.

ಉಳಿದಂತೆ ಕಲಾ ಮತ್ತು ವಾಣಿಜ್ಯ ವಿಭಾಗಗಳ ಉತ್ತರ ಪತ್ರಿಕೆ ಮೌಲ್ಯಮಾಪನ ಕಾರ್ಯ ಸುಸೂತ್ರವಾಗಿ ನಡೆಯುತ್ತಿದೆ. ವಿಜ್ಞಾನ ಪತ್ರಿಕೆಗಳ ಮೌಲ್ಯಮಾಪನವೂ ಸುಗಮವಾಗಿ ನಡೆಯುವುದೆಂಬ ನಿರೀಕ್ಷೆ ಇದೆ ಎಂದು ನುಡಿದರು.