ಸೊಲ್ಲಾಪುರ ಎಕ್ಸ್ ಪ್ರೆಸ್ ರೈಲು ಹಾಸನಕ್ಕೆ ವಿಸ್ತರಣೆ

ಶ್ರವಣಬೆಳಗೊಳ: ಸೊಲ್ಲಾಪುರದಿಂದ ಯಶವಂತಪುರ ಮಾರ್ಗವಾಗಿ ಸಂಚರಿಸುತ್ತಿದ್ದ ಸೊಲ್ಲಾಪುರ ಎಕ್ಸ್ ಪ್ರೆಸ್ ರೈಲು ಸಂಚರವನ್ನು ಹಾಸನದವರೆಗೆ ವಿಸ್ತರಿಸಲಾಗಿದ್ದು, ಈ ರೈಲಿಗೆ ಶ್ರವಣಬೆಳಗೊಳದ ರೈಲ್ವೆ ನಿಲ್ದಾಣದಲ್ಲಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಪೂರ್ಣಕುಂಭ ಸ್ವಾಗತ ಕೋರಿದರು.

ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಭಗವಾನ್ ಬಾಹುಬಲಿ, ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ಆಶೀರ್ವಾದ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪರಿಶ್ರಮದಿಂದ ಮತ್ತೊಂದು ರೈಲು ಸಂಚಾರಕ್ಕೆ ಚಾಲನೆ ದೊರೆತಿದ್ದು, ಈ ಭಾಗದ ಪ್ರವಾಸೋ ದ್ಯಮ ಬೆಳೆಯಲು ಸಾಧ್ಯವಾಗಲಿದೆ ಎಂದರು.

ಮಂತ್ರಾಲಯ, ರಾಯಚೂರು, ಕಲ್ಬುರ್ಗಿ, ಹಾಗೂ ಹೈದರಾಬಾದ್ ಕರ್ನಾಟಕದ ಭಾಗಗಳಿಗೆ ತೆರಳುವ ಪ್ರಯಾಣ ಕರಿಗೆ ಹಾಗೂ ಪ್ರವಾಸಿ ತಾಣದಲ್ಲಿ ವಿಶ್ವದಲ್ಲೇ ಅಗ್ರಮಾನ್ಯ ಸ್ಥಾನ ಪಡೆದಿರುವ ಶ್ರವಣಬೆಳಗೊಳಕ್ಕೆ ಆಗಮಿಸುವವರಿಗೆ, ಹಾಸನ ಸುತ್ತ ಮುತ್ತಲಿನ ಪ್ರವಾಸಿ ತಾಣಗಳಿಗೆ ಬರುವ ಯಾತ್ರಾರ್ಥಿ ಗಳು ಹಾಗೂ ಪ್ರವಾಸಿಗರಿಗೆ ಅನುಕೂಲವಾಗಲಿದೆ. ಆದರೆ ತಾಲೂಕು ಕೇಂದ್ರವಾಗಿರುವ ಚನ್ನರಾಯಪಟ್ಟಣದಲ್ಲಿ ರೈಲು ನಿಲುಗಡೆ ಇಲ್ಲದಿರುವುದರ ಬಗ್ಗೆ ಸಂಸದ ದೇವೇಗೌಡರ ಬಳಿ ಚರ್ಚಿಸಿ ಕೂಡಲೇ ಕೇಂದ್ರಕ್ಕೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.

ಸೊಲ್ಲಾಪುರದಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ರೈಲನ್ನು (ಜೂನ್ 14) ಇಂದಿನಿಂದ ಹಾಸನದವರೆಗೂ ವಿಸ್ತರಿಸಲಾಗಿದ್ದು, ಪ್ರತಿದಿನ ಬೆಳಿಗ್ಗೆ ಯಶವಂತ ಪುರದಿಂದ 7.40 ಹೊರಟು ಶ್ರವಣಬೆಳಗೊಳಕ್ಕೆ 9.55ಕ್ಕೆ ಆಗಮಿಸಲಿದ್ದು, ಹಾಸನ ನಿಲ್ದಾಣಕ್ಕೆ 11.25ಕ್ಕೆ ತಲುಪಲಿದೆ. ಮತ್ತು ಹಾಸನ ನಿಲ್ದಾಣದಿಂದ ಸಂಜೆ 4.10ಕ್ಕೆ ಹೊರಟು ಶ್ರವಣಬೆಳಗೊಳ ನಿಲ್ದಾಣಕ್ಕೆ 4.51ಕ್ಕೆ ಆಗಮಿಸಿ ಯಶವಂತಪುರ ನಿಲ್ದಾಣಕ್ಕೆ ರಾತ್ರಿ 8.10ಕ್ಕೆ ತಲುಪಲಿದೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಜಿಪಂ ಸದಸ್ಯರಾದ ಮಮತಾ ರಮೇಶ್, ಗ್ರಾಪಂ ಅಧ್ಯಕ್ಷೆ ಹೇಮಾ ಪ್ರಭಾಕರ್, ಸ್ಟೇಷನ್ ಮಾಸ್ಟರ್ ಶರವಣ, ಪ್ರಸನ್ನಕುಮಾರ್, ಎಪಿಎಂಸಿ ಸದಸ್ಯೆ ಶಿಲ್ಪಾ ಶ್ರೀನಿವಾಸ್, ಮುಖಂಡರಾದ ಪರಮದೇವ ರಾಜೇಗೌಡ, ಕಬ್ಬಾಳು ರಮೇಶ್, ಪಿ.ಕೆ.ಮಂಜೇಗೌಡ, ಎಸ್.ಎಂ.ಲಕ್ಷ್ಮಣ್, ಎ.ಆರ್.ಶಿವರಾಜು ಇದ್ದರು.

ನೂತನ ರೈಲು ಸಂಚಾರಕ್ಕೆ ಸಚಿವರಿಂದ ಚಾಲನೆ: ಹಾಸನ ರೈಲ್ವೆ ನಿಲ್ದಾಣದಲ್ಲಿ ಗುರುವಾರ ಲೋಕೋಪ ಯೋಗಿ ಇಲಾಖೆ ಸಚಿವ ಹೆಚ್.ಡಿ.ರೇವಣ್ಣ ಅವರು ಹಾಸನದಿಂದ ಯಶವಂತಪುರ ಮಾರ್ಗವಾಗಿ ಸೊಲ್ಲಾ ಪುರಕ್ಕೆ ಹೊರಡುವ ಸೊಲ್ಲಾಪುರ ಎಕ್ಸ್ ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಶಾಸಕರಾದ ಹೆಚ್.ಕೆ ಕುಮಾರ ಸ್ವಾಮಿ, ಸಿ.ಎನ್.ಬಾಲಕೃಷ್ಣ, ಕೆ.ಎಸ್.ಲಿಂಗೇಶ್, ಪ್ರೀತಂ ಜೆ.ಗೌಡ, ವಿಧಾನ ಪರಿಷತ್ ಸದಸ್ಯರಾದ ಎಂ.ಎ.ಗೋಪಾಲ ಸ್ವಾಮಿ, ಡಿಸಿ ಡಾ.ಪಿ.ಸಿ.ಜಾಫರ್ ಹಾಜರಿದ್ದರು.