ಮೂವರು ಸುಮಲತಾ ತಂತ್ರಕ್ಕೆ ವ್ಯಾಪಕ ಟೀಕೆ

ಮಂಡ್ಯ: ಹೈವೋಲ್ಟೇಜ್ ಸ್ಪರ್ಧಾಕಣ ಎನಿಸಿಕೊಂಡು ಇಡೀ ದೇಶದ ಗಮನ ಸೆಳೆದಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲೀಗ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರನ್ನು ಸೋಲಿಸಲು ದಳಪತಿಗಳು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.

`ಸುಮಲತಾ’ ಹೆಸರಿನ ಮೂವರು ಮಹಿಳೆಯರು ನಾಮಪತ್ರ ಸಲ್ಲಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮತ ಹಾಕುವವರಲ್ಲಿ ಗೊಂದಲ ಮೂಡಿಸಲೆಂದೇ ಈ ಕುತಂತ್ರ ಮಾಡಲಾಗಿದೆ. ನಟ ನೀನಾಸಂ ಸತೀಶ್ ಅಭಿನಯದ `ಅಯೋಗ್ಯ’ ಸಿನಿಮಾದಲ್ಲಿ `ಬಚ್ಚೇಗೌಡ’ ಹೆಸರಿನ ಹಲವರಿಂದ ನಾಮಪತ್ರ ದಾಖಲಿಸಿ ನೈಜ ಅಭ್ಯರ್ಥಿಯನ್ನು ಸೋಲಿಸುವ ಹುನ್ನಾರದ ಮಾದರಿಯಲ್ಲೇ ಮಂಡ್ಯದಲ್ಲೂ ಸುಮಲತಾ ಅಂಬರೀಶ್ ವಿರುದ್ಧ ತಂತ್ರ ಹೂಡಲಾಗಿದೆ ಎಂಬ ಟೀಕೆಗಳು ಜಿಲ್ಲೆಯಾದ್ಯಂತ ಕೇಳಿಬರುತ್ತಿವೆ.

ಜೆಡಿಎಸ್ ಬೆಂಬಲಿತ ಮಹಿಳೆಯರಾದ ಕೆ.ಆರ್.ಪೇಟೆಯ ಗೊರವಿ ಗ್ರಾಮದ ಮಂಜೇಗೌಡ ಅವರ ಪತ್ನಿ ಸುಮಲತಾ, ಕನಕಪುರ ರಂಗನಾಥ ಬಡಾವಣೆಯ ದರ್ಶನ್ ಅವರ ಪತ್ನಿ ಸುಮಲತಾ, ಶ್ರೀರಂಗಪಟ್ಟಣ ತಾಲೂಕಿನ ಟಿ.ಎಂ.ಹೊಸೂರು ಸಿದ್ದೇಗೌಡರ ಪತ್ನಿ ಸುಮಲತಾ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸಲು ಕಡೆಯ ದಿನವಾದ ಮಂಗಳವಾರ ಜೆಡಿಎಸ್ ಮುಖಂಡರ ಜತೆಗೆ ಜಿಲ್ಲಾ ಚುನಾವಣಾಧಿಕಾರಿ ಕಚೇರಿಗೆ ಆಗಮಿಸಿದ ಈ ಮೂವರು ಮಹಿಳೆಯರು ನಾಮಪತ್ರ ಸಲ್ಲಿಸಿದರು. ಜೆಡಿಎಸ್ ಮುಖಂಡರ ಈ ನಡೆ ಜಿಲ್ಲೆಯಲ್ಲಿ ತೀವ್ರ ಟೀಕೆಗೊಳಗಾಗಿದೆ.