ಚಾಮುಂಡಿಬೆಟ್ಟದಲ್ಲಿ ಬೆಂಕಿ: ಅರ್ಧ ಎಕರೆ ಅರಣ್ಯ ಬೆಂಕಿಗಾಹುತಿ ಬೆಂಕಿ ಶಮನಗೊಳಿಸಿದ ಅಗ್ನಿಶಾಮಕ ದಳ

ಮೈಸೂರು, ಡಿ.28(ಎಂಕೆ)- ಚಾಮುಂಡಿಬೆಟ್ಟದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಸುಮಾರು ಅರ್ಧ ಎಕರೆಗೂ ಹೆಚ್ಚು ಅರಣ್ಯ ಪ್ರದೇಶ ಸುಟ್ಟು ಕರಕಲಾಗಿದೆ. ಸೋಮವಾರ ಸಂಜೆ ಈ ಘಟನೆ ನಡೆದಿದೆ.

ಉತ್ತನಹಳ್ಳಿ ಜ್ವಾಲಾಮುಖಿ ಅಮ್ಮ ನವರ ದೇವಸ್ಥಾನ ಕಡೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಸಂಜೆ 4.45 ರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನೋಡ ನೋಡುತ್ತಲೇ ಹೊತ್ತಿ ಉರಿಯಲಾರಂಭಿಸಿದೆ. ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತುಕೊಂಡ ಅಗ್ನಿಶಾಮಕ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ. ಸರಸ್ವತಿಪುರಂ ಮತ್ತು ಬನ್ನಿಮಂಟಪ ಅಗ್ನಿಶಾಮಕ ಠಾಣಾ ಸಿಬ್ಬಂದಿ 2 ಲಾರಿಗಳ ಮೂಲಕ ಒಂದು ಗಂಟೆಗೂ ಹೆಚ್ಚುಕಾಲ ನೀರನ್ನು ಹಾಯಿಸಿ ಬೆಂಕಿಯನ್ನು ನಂದಿಸಿದರು. ಸಂಜೆ ವೇಳೆಗೆ ತಂಪಾದ ವಾತಾವರಣವಿದ್ದ ಕಾರಣ ಬೆಂಕಿ ಹೆಚ್ಚಾಗಿ ವ್ಯಾಪಿಸಲಿಲ್ಲ. ಮದ್ಯಾಹ್ನದ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದರೆ ನಂದಿಸಲು ಕಷ್ಟವಾಗುತ್ತಿತ್ತು ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ರಾಜು ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

ಕೋವಿಡ್ ಸೆಂಟರ್ ಬಳಿ ಬೆಂಕಿ: ಮಂಡಕಳ್ಳಿ ವಿಮಾನ ನಿಲ್ದಾಣದ ಸಮೀಪ ದಲ್ಲಿರುವ ಕೆಎಸ್‍ಒಯು ಕಟ್ಟಡದ(ಕೋವಿಡ್ ಸೆಂಟರ್) ಹಿಂಭಾಗದ ಖಾಲಿ ಜಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತ್ವರಿತ ಕಾರ್ಯಾಚರಣೆ ನಡೆದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.