ಕೊರೊನಾ ಉಪತಳಿಗೆ ಕಡಿವಾಣ ಹಾಕಲು ಸರ್ಕಾರದ ಸಲಹೆ ಪಾಲಿಸಿ; ಜಿಲ್ಲಾಡಳಿತದೊಂದಿಗೆ ಸಹಕರಿಸಿ

ಮೈಸೂರು, ಡಿ.23(ಎಸ್‍ಬಿಡಿ)- ಮೈಸೂರು ಜಿಲ್ಲೆಯಲ್ಲಿ ಸದ್ಯ ನಾಲ್ಕು ಕೊರೊನಾ ಸೋಂಕು ಪ್ರಕರಣಗಳಿದ್ದು, ಎಲ್ಲರೂ ಮನೆಯಲ್ಲೇ ಆರೈಕೆಯಲ್ಲಿ ದ್ದಾರೆ. ಆದರೂ ಮುಂಜಾಗ್ರತಾ ಕ್ರಮ ಗಳನ್ನು ಕೈಗೊಳ್ಳಲಾಗುತ್ತಿದ್ದು ಸರ್ಕಾರದ ಸಲಹೆಗಳನ್ನು ಪರಿಪಾಲಿಸುವ ಮೂಲಕ ಸಾರ್ವಜನಿಕರೂ ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮನವಿ ಮಾಡಿದ್ದಾರೆ.

ಹಲವು ದೇಶಗಳಲ್ಲಿ ಕೊರೊನಾ ರೂಪಾಂತರಿ ಬಿ.ಎಫ್-7 ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಯಲ್ಲಿ ಭಾರತ ಸರ್ಕಾರದ ನಿರ್ದೇ ಶನದ ಮೇರೆಗೆ ರಾಜ್ಯ ಸರ್ಕಾರ ಸಲಹೆ ರೂಪದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಇಂದು ಜಿಲ್ಲಾ ಕೋವಿಡ್ ನಿರ್ವಹಣಾ ಸಮಿತಿ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದರು.

ಚೀನಾ, ಯುಎಸ್‍ಎ, ಜಪಾನ್ ಸೇರಿ ದಂತೆ ಹಲವು ದೇಶಗಳಲ್ಲಿ ಕೋವಿಡ್ ಮತ್ತೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಆಯುಕ್ತರ ಮೂಲಕ ಸರ್ಕಾರ ಹಲವು ನಿರ್ದೇಶನಗಳನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಇಂದು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ಮಾಡಿ, ಮುಂಜಾ ಗ್ರತಾ ಕ್ರಮಗಳ
ಬಗ್ಗೆ ಚರ್ಚೆ ನಡೆಸಿ ಹಲವು ಸೂಚನೆಗಳನ್ನು ನೀಡಲಾಗಿದೆ. ಮುಖ್ಯವಾಗಿ ಪರೀಕ್ಷೆ, ಸಂಪರ್ಕಿತರ ಪತ್ತೆ ಹಾಗೂ ಚಿಕಿತ್ಸೆ(ಟೆಸ್ಟಿಂಗ್, ಟ್ರೇಸಿಂಗ್, ಟ್ರೀಟ್‍ಮೆಂಟ್)ಗೆ ಸಂಬಂಧಿಸಿದಂತೆ ನಿರ್ದೇಶನ ನೀಡಲಾಗಿದೆ. ಜೊತೆಗೆ ಮುಂಜಾಗ್ರತೆಯಿಂದ ಬಿ.ಎಫ್-7 ಪ್ರಕರಣದ ಬಗ್ಗೆಯೂ ನಿಗಾ ವಹಿಸುವಂತೆ ತಿಳಿಸಲಾಗಿದೆ ಎಂದರು.

ಮಾಸ್ಕ್ ಧರಿಸಲು ಸಲಹೆ: ಸದ್ಯಕ್ಕೆ ಮೈಸೂರು ಜಿಲ್ಲೆಯಲ್ಲಿ ಆತಂಕದ ಪರಿಸ್ಥಿತಿ ಇಲ್ಲ. ಆದರೆ ಹಾಗಾಗದಂತೆ ಪ್ರತಿಯೊಬ್ಬರೂ ಸ್ವಯಂ ಪ್ರೇರಿತವಾಗಿ ಸರ್ಕಾರದ ಸಲಹೆಗಳನ್ನು ಪಾಲಿಸುವುದು ಅವಶ್ಯವಾಗಿದೆ. ಆಸ್ಪತ್ರೆಗಳಲ್ಲಿ ವೈದ್ಯರು, ಸಿಬ್ಬಂದಿ ಹಾಗೂ ಅಲ್ಲಿಗೆ ಬರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂದು ಸರ್ಕಾರದ ಸೂಚನೆಯಲ್ಲಿದೆ. ಹಾಗೆಯೇ ಮಾಲ್, ಚಿತ್ರಮಂದಿರ, ಬಸ್, ರೈಲು, ಇನ್ನಿತರ ಒಳಾಂಗಣದಲ್ಲಿರುವಾಗ ಮಾಸ್ಕ್ ಧರಿಸಲು ಪ್ರೋತ್ಸಾಹಿಸುವಂತೆ ಸೂಚಿಸಲಾಗಿದೆ. ಮೈಸೂರಿಗೆ ವಿವಿಧ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಪ್ರವಾಸಿಗರು ಬರುವುದರಿಂದ ಅರಮನೆ, ಮೃಗಾಲಯ, ಚಾಮುಂಡಿ ಬೆಟ್ಟ, ನಂಜುಂಡೇಶ್ವರ ದೇವಸ್ಥಾನ ಇನ್ನಿತರ ಪ್ರವಾಸಿ ತಾಣಗಳಲ್ಲಿ ನಗರಪಾಲಿಕೆ ಹಾಗೂ ಆಯಾ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳು ತಂಡವನ್ನು ನಿಯೋಜಿಸಿ ಪ್ರವಾಸಿಗರಿಗೆ ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸಲು ತಿಳಿಸಲಾಗಿದೆ. ಸದ್ಯಕ್ಕೆ ಮಾಸ್ಕ್ ಧರಿಸುವಂತೆ ಸಲಹೆ ನೀಡಲಾಗುವುದೇ ಹೊರತು ದಂಢ ವಿಧಿಸುವಂತಹ ಸ್ಥಿತಿ ಇಲ್ಲ ಎಂದು ತಿಳಿಸಿದರು.

ವ್ಯಾಕ್ಸಿನೇಷನ್‍ಗೆ ಆದ್ಯತೆ: ಜಿಲ್ಲೆಯಲ್ಲಿ 12 ವರ್ಷಕ್ಕಿಂತ ಮೇಲ್ಪಟ್ಟ 26,78,184 ಮಂದಿ ಕೋವಿಡ್ ಮೊದಲ ಲಸಿಕೆ ಹಾಗೂ ಹೊರಗಿನವರೂ ಸೇರಿ 27.72 ಲಕ್ಷ ಮಂದಿ ಎರಡನೇ ಲಸಿಕೆ ಪಡೆದಿದ್ದಾರೆ. ಇವರಲ್ಲಿ ಪ್ರಿಕಾಷನರಿ ಡೋಸ್‍ಗೆ ಅರ್ಹರಾದ 24,00,542 ಜನರಲ್ಲಿ 6.77 ಲಕ್ಷ ಮಂದಿ ಮಾತ್ರ ಲಸಿಕೆ ಪಡೆದಿದ್ದಾರೆ. ಹಾಗಾಗಿ ವೈದ್ಯಕೀಯ ಕ್ಷೇತ್ರ, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ ಸೇರಿದಂತೆ ಮುಂಚೂಣಿ ಕಾರ್ಯಕರ್ತರಿಗೆ ಆದ್ಯತೆ ಮೇರೆಗೆ ವ್ಯಾಕ್ಸಿನ್ ನೀಡುವಂತೆ ತಿಳಿಸಲಾಗಿದೆ. ಸದ್ಯ ನಿತ್ಯ 300-600 ವ್ಯಾಕ್ಸಿನೇಷನ್ ಆಗುತ್ತಿದ್ದು, ಇನ್ನೂ 59 ಸಾವಿರ ವ್ಯಾಕ್ಸಿನ್ ಇದೆ. ನಮ್ಮಲ್ಲಿ ಕೋವ್ಯಾಕ್ಸಿನ್ ಹೆಚ್ಚಿನ ಪ್ರಮಾಣದಲ್ಲಿದ್ದು, ಕೋವಿಶೀಲ್ಡ್‍ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಅಗತ್ಯ ಸಿದ್ಧತೆ: ನಗರದ ಕೆಆರ್‍ಎಸ್ ರಸ್ತೆಯಲ್ಲಿರುವ ಜಿಲ್ಲಾಸ್ಪತ್ರೆ ಹಾಗೂ ಕೆ.ಆರ್.ಆಸ್ಪತ್ರೆಯಲ್ಲಿ ತಲಾ 50 ಐಸೊಲೇಷನ್ ಬೆಡ್‍ಗಳ ಘಟಕ ಹಾಗೂ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ತಲಾ 5 ಐಸೊಲೇಷನ್ ಬೆಡ್‍ಗಳನ್ನು ಕಾಯ್ದಿರಿಸಬೇಕು. ಹೆಚ್.ಡಿ.ಕೋಟೆ ಆಸ್ಪತ್ರೆಯಲ್ಲಿ 4 ಹಾಗೂ ಉಳಿದ ತಾಲೂಕು ಆಸ್ಪತ್ರೆಗಳಲ್ಲಿ ತಲಾ 5 ವೆಂಟಿಲೇಟರ್‍ಗಳು, ಆಕ್ಸಿಜನ್ ಉತ್ಪಾದನಾ ಘಟಕಗಳಿವೆ. ಈ ಬಗ್ಗೆ ಮತ್ತೆ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ವಿಮಾನ ನಿಲ್ದಾಣದಲ್ಲಿ ಪ್ರಯಾಣ ಇತಿಹಾಸದ ಬಗ್ಗೆ ಅವಲೋಕಿಸಿ ಟೆಸ್ಟಿಂಗ್ ನಡೆಸಲು ಜಿಲ್ಲಾ ಆರೋಗ್ಯ ಇಲಾಖೆ ವತಿಯಿಂದ ಲ್ಯಾಬ್ ಟೆಕ್ನಿಷಿಯನ್ ನಿಯೋಜಿಸಲಾಗುವುದು ಎಂದರು.

ಜಾಗೃತರಾಗಿರಿ: ಜಿಲ್ಲೆಯಲ್ಲಿರುವ ನಾಲ್ವರು ಸೋಂಕಿತರೂ ಗುಣಮುಖರಾಗುತ್ತಿದ್ದಾರೆ. ಇವರಲ್ಲಿ ಮೂವರು 50 ವರ್ಷದ ಒಳಗಿನವರು. ಸದ್ಯಕ್ಕೆ ಆತಂಕಪಡುವ ಪರಿಸ್ಥಿತಿ ಇಲ್ಲ. ಆದರೆ ಸ್ವಯಂ ಪ್ರೇರಿತರಾಗಿ ಮಾಸ್ಕ್ ಧರಿಸುವುದು, ಲಸಿಕೆ ಹಾಕಿಸಿಕೊಳ್ಳುವುದು ಸೇರಿದಂತೆ ಸರ್ಕಾರದ ಸಲಹೆಗಳನ್ನು ಪರಿಪಾಲಿಸಬೇಕು. ಅದರಲ್ಲೂ ಇತರೆ ಆರೋಗ್ಯ ಸಮಸ್ಯೆ ಇದ್ದವರು, ಬೂಸ್ಟರ್ ಡೋಸ್ ಪಡೆಯದವರು ಹೊರ ಹೋಗುವಾಗ ಮಾಸ್ಕ್ ಧರಿಸಬೇಕು. ಪರಿಸ್ಥಿತಿ ಕೈಮೀರದಂತೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಇಂದು ಸಭೆ ನಡೆಸಿ, ಕ್ರಮ ವಹಿಸಲಾಗಿದೆ. ಇದಕ್ಕೆ ಜನರೂ ಸಹಕರಿಸಬೇಕೆಂದು ಹೇಳಿದರು.
ಜಿಲ್ಲಾ ಪಂಚಾಯ್ತಿ ಸಿಇಓ ಬಿ.ಆರ್.ಪೂರ್ಣಿಮಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪ್ರಸಾದ್, ಮೈಸೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯ ಡೀನ್ ಡಾ.ದಾಕ್ಷಾಯಣಿ ಸೇರಿದಂತೆ ಆರೋಗ್ಯ ಇಲಾಖೆ ಹಲವು ಅಧಿಕಾರಿಗಳು ಹಾಜರಿದ್ದರು.