ಮೈಸೂರಲ್ಲಿ `ಕೋವಿಡ್ ಕಾರ್ಯಪಡೆ’ ರಚನೆ

ಮೈಸೂರು, ಜು.19(ಆರ್‍ಕೆಬಿ)- ಕೋವಿಡ್-19 ಹರಡುವಿಕೆ ನಿಯಂ ತ್ರಣಕ್ಕಾಗಿ ಮೈಸೂರಿನಲ್ಲಿ `ಕೋವಿಡ್ ಕಾರ್ಯಪಡೆ’ ರಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಮೈಸೂರಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ಕೋವಿಡ್-19 ಪರಿಶೀಲನಾ ಸಭೆ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಕೃಷ್ಣರಾಜ, ಚಾಮರಾಜ, ನರಸಿಂಹರಾಜ ಮತ್ತು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಗಳಲ್ಲಿ ಶಾಸಕರ ನೇತೃತ್ವದಲ್ಲಿ ಕೋವಿಡ್ ಕಾರ್ಯಪಡೆ ರಚನೆಗೆ ನಿರ್ಧರಿಸಲಾಗಿದೆ. ನರಸಿಂಹರಾಜ ಕ್ಷೇತ್ರದ ಶಾಸಕರು ಅನಾರೋಗ್ಯದಿಂದಿರುವ ಕಾರಣ ಅಲ್ಲಿ ಸಂಸದ ಪ್ರತಾಪ್ ಸಿಂಹ ಕಾರ್ಯಪಡೆ ನೇತೃತ್ವ ವಹಿಸಲಿದ್ದಾರೆ. ಇದರಲ್ಲಿ ಎಸಿ, ಪೊಲೀಸ್ ಅಧಿಕಾರಿ, ವೈದ್ಯಾಧಿಕಾರಿ ಸೇರಿದಂತೆ ಎಲ್ಲರೂ ಕೋವಿಡ್ ನಿಯಂತ್ರಣಕ್ಕೆ ಶ್ರಮಿಸಲಿದ್ದಾರೆ ಎಂದರು.

ಹೆಚ್ಚು ಸೋಂಕಿತರು ಇರುವ ಎನ್‍ಆರ್ ಕ್ಷೇತ್ರದಲ್ಲಿ ವಿಶೇಷ ಗಮನ ಹರಿಸಲಾಗುವುದು. ಪಾಸಿಟಿವ್ ಪ್ರಕರಣ ಕಂಡುಬಂದ ಕೂಡಲೇ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಬೇಕು. ಇದಕ್ಕೆ ನಾಗರಿಕರು ಸ್ಪಂದಿಸಬೇಕು ಎಂದು ಮನವಿ ಮಾಡಿದರು.

ಕರಪತ್ರ: ನೆಗಡಿ, ಕೆಮ್ಮು, ಜ್ವರ ಮೊದಲಾದ ರೋಗಲಕ್ಷಣ ಗೋಚರಿಸಿ ದಾಗ ಸೋಂಕಿತರು ಯಾರನ್ನು ಸಂಪರ್ಕಿಸಬೇಕು? ಯಾವ ಆಸ್ಪತ್ರೆಗೆ ಭೇಟಿ ನೀಡಬೇಕು? ಆ ಭಾಗದ ನೋಡಲ್ ಅಧಿಕಾರಿ, ಆರೋಗ್ಯಾಧಿಕಾರಿ ಯಾರು? ಎಂಬ ಮಾಹಿತಿಗಳ ಕರಪತ್ರವನ್ನು ಮನೆ ಮನೆಗೂ ತಲುಪಿಸಲು ಸೂಚನೆ ನೀಡಲಾಗಿದೆ.

ಅಧಿಕಾರಿಗಳ ವಿರುದ್ಧ ಕ್ರಮ: ಕೆಳಹಂತದ ಅಧಿಕಾರಿಗಳು ಸರಿ ಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂಬ ದೂರಿದೆಯಲ್ಲ? ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಅಂಥವರ ಬಗ್ಗೆ 3-4 ದಿನ ನೋಡಿ ಬಳಿಕ ಕ್ರಮ ತೆಗೆದುಕೊಳ್ಳಲಾಗುವುದು. ಪ್ರತಿ ಕ್ಷೇತ್ರಕ್ಕೂ ಒಬ್ಬ ಎಸಿಯನ್ನು ಉಸ್ತುವಾರಿಗೆ ನಿಯೋಜಿಸಿ, ಆಸ್ಪತ್ರೆಗಳಲ್ಲಿ ಆಹಾರ ವಿತರಣೆ, ವೈದ್ಯಕೀಯ ವ್ಯವಸ್ಥೆಯತ್ತ ನಿಗಾ ಇಡುವ ಜವಾಬ್ದಾರಿ ನೀಡಲಾಗುವುದು ಎಂದರು.