ನಿರ್ವಹಣೆಯಿಲ್ಲದೆ ದುಸ್ಥಿತಿಯತ್ತ ಕೋಟೆ ಅರಮನೆ

ಮಡಿಕೇರಿ,ಫೆ.28-ಸುಣ್ಣಬಣ್ಣ ಕಾಣದೆ ಸಂಪೂರ್ಣ ದುಸ್ಥಿತಿಯಲ್ಲಿರುವ ಅರಮನೆ, ಬೀಳಲು ಸಜ್ಜಾಗಿರುವ ಮೇಲ್ಛಾವಣಿ, ಉರುಳಿ ಬಿದ್ದು ಪುಡಿಪುಡಿಯಾಗಿರುವ ಹೆಂಚುಗಳು, ಬೀಗ ಹಾಕಿರುವ ಬಾಗಿಲು ಗಳು. ಇದು ಮಡಿಕೇರಿಯ ಐತಿಹಾಸಿಕ ಕೋಟೆ ಆವರಣದಲ್ಲಿರುವ ಅರಮನೆಯ ದುಸ್ಥಿತಿ.

ಈ ಹಿಂದೆ ಈ ಅರಮನೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಹಲವು ಇಲಾಖೆಗಳ ಕಚೇರಿಗಳು ಕಾರ್ಯ ನಿರ್ವಹಿಸುತ್ತಿದ್ದವು. ಸರಕಾರಿ ಕಚೇರಿ ಗಳಿದ್ದ ಕಾರಣದಿಂದ ಅರಮನೆಯನ್ನು ದುರಸ್ಥಿ ಮಾಡುವ ಕೆಲಸಕ್ಕೆ ಪ್ರಾಚ್ಯವಸ್ತು ಇಲಾಖೆ ಕೈ ಹಾಕಿರಲಿಲ್ಲ. ಈ ನಡುವೆ ರಾಜ್ಯ ಉಚ್ಚ ನ್ಯಾಯಾಲಯದ ಸೂಚನೆ ಮೇರೆಗೆ ಎಲ್ಲಾ ಸರಕಾರಿ ಕಚೇರಿಗಳನ್ನು ಈಗ ಸ್ಥಳಾಂತರ ಮಾಡಲಾಗಿದೆ.

ಸರಕಾರಿ ಕಚೇರಿಗಳು ತೆರವಾಗುತ್ತಿ ದ್ದಂತೆ ಅರಮನೆಯನ್ನು ಬಂದ್ ಮಾಡಿ ಕಚೇರಿಗಳ ಎಲ್ಲಾ ದ್ವಾರಗಳಿಗೆ ಬೀಗ ಹಾಕಲಾಗಿದ್ದು, ಇದರ ಒಳಗಡೆಗೆ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಮಾಡಲಾಗಿದೆ. ಖಾಲಿ ಕೋಟೆ ಪುಂಡ ಪೋಕರಿಗಳ ಅನೈತಿಕ ಚಟುವಟಿಕೆಯ ತಾಣವಾಗಿ ಪರಿವರ್ತನೆಯಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿ ಬಂದ ಹಿನ್ನಲೆಯಲ್ಲಿ ಅರಮನೆಯನ್ನು ಕಾಯಲು ಭದ್ರತಾ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಒಟ್ಟು 6 ಮಂದಿ ಭದ್ರತಾ ಸಿಬ್ಬಂದಿಗಳಿದ್ದು, ಈ ಪೈಕಿ ಮೂವರು ಗನ್ ಮ್ಯಾನ್‍ಗಳಿ ದ್ದಾರೆ. ಈ ಸಿಬ್ಬಂದಿಗಳು ಹಗಲು ಮತ್ತು ರಾತ್ರಿ ಪಾಳಿಯಲ್ಲೂ ಕರ್ತವ್ಯ ನಿರ್ವಹಿ ಸುತ್ತಿದ್ದಾರೆ. ಸಂಜೆ 6 ಗಂಟೆಯ ನಂತರ ಕೋಟೆ ಆವರಣಕ್ಕೆ ಯಾರಿಗೂ ಪ್ರವೇಶ ವಿಲ್ಲ. ಹೀಗಾಗಿ ಇಲ್ಲಿ ನಡೆಯುತ್ತಿದ್ದ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಬಿದ್ದಂತಾಗಿದೆ.

ಆದರೆ, ಕೇವಲ ಕೋಟೆ ಕಾಯೋಕೆ ಸೆಕ್ಯೂರಿಟಿ ಸಿಬ್ಬಂದಿಗಳನ್ನು ನಿಯೋಜಿ ಸಿರುವ ಪುರಾತತ್ವ ಇಲಾಖೆ ಅರಮನೆ ರಕ್ಷಣೆ ಮಾಡೋಕೆ ಮಾತ್ರ ಮುಂದಾಗು ತ್ತಿಲ್ಲ ಎನ್ನುವ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಇದೀಗ ರಾಜ್ಯ ಉಚ್ಚ ನ್ಯಾಯಾಲಯಕ್ಕೆ ಭಾರತೀಯ ಸರ್ವೇಕ್ಷಣ ಹಾಗೂ ಪುರಾತತ್ವ ಇಲಾಖೆ ಸುಮಾರು 53 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಅರಮನೆ ದುರಸ್ಥಿ ಕಾರ್ಯ ಕೈಗೊಳ್ಳುವ ಬಗ್ಗೆ ಅಫಿಡವಿಟ್ ಕೂಡ ಸಲ್ಲಿಸಿದೆ. ಈ ನಡುವೆ ಅರಮನೆ ದುರಸ್ಥಿ ಮಾಡಲು ಬೇಕಾಗುವ ಸಾಮಾಗ್ರಿಗಳನ್ನು ಕೂಡ ಕೋಟೆ ಆವರಣದಲ್ಲಿ ಸ್ವಲ್ಪ ಮಟ್ಟಿಗೆ ಸಂಗ್ರಹಿಸಲಾಗಿದೆ. ಮುಂದಿನ 2 ತಿಂಗಳು ಕಳೆದರೆ ಮತ್ತೆ ಮಳೆಗಾಲ ಆರಂಭವಾಗಲಿದ್ದು, ಕಾಮಗಾರಿ ನಡೆಸಲು ಅಸಾಧ್ಯವಾಗಲಿದೆ. ಹೀಗಾಗಿಯೇ ಇಂದಿಗೂ ದುರಸ್ತಿ ಕಾರ್ಯ ಪ್ರಾರಂಭಿಸದಿರುವ ಬಗ್ಗೆ ಸಾರ್ವಜನಿಕ ವಲಯದಿಂದ ಅಸಮಾ ಧಾನ ವ್ಯಕ್ತವಾಗುತ್ತಿದೆ.

ಪ್ರಸಾದ್ ಸಂಪಿಗೆಕಟ್ಟೆ