ಜನತಾ ಕಫ್ರ್ಯೂಗೆ ಕೆ.ಎಂ.ದೊಡ್ಡಿಯಲ್ಲಿ ಉತ್ತಮ ಪ್ರತಿಕ್ರಿಯೆ

ಭಾರತೀನಗರ, ಏ.28(ಅ.ಸತೀಶ್)- ಕೊರೋನಾ ಎರಡನೇ ಅಲೆಯನ್ನು ನಿಯಂ ತ್ರಿಸಲು ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಜನತಾ ಕಫ್ರ್ಯೂಗೆ ಕೆ.ಎಂ.ದೊಡ್ಡಿಯಲ್ಲಿ ಬುಧ ವಾರ ಉತ್ತಮ ಪ್ರತಿಕ್ರಿಯೆ ಕಂಡು ಬಂತು.

ಕೆ.ಎಂ.ದೊಡ್ಡಿಯಲ್ಲಿ ಬೆಳಗ್ಗೆ 6 ರಿಂದ 10 ಗಂಟೆಯ ತನಕ ಅಗತ್ಯ ವಸ್ತುಗಳ ಅಂಗಡಿ ಮಾತ್ರ ತೆರೆದಿತ್ತು. 10 ಗಂಟೆಯ ನಂತರ ಔಷಧಿ ಅಂಗಡಿ, ಆಸ್ಪತ್ರೆಗಳನ್ನು ಹೊರತು ಪಡಿಸಿ ಉಳಿದೆಲ್ಲ ಅಂಗಡಿಗಳು ಸಂಪೂರ್ಣ ವಾಗಿ ಬಂದ್ ಮಾಡುವ ಮೂಲಕ ಜನತಾ ಕಫ್ರ್ಯೂಗೆ ಸಂಪೂರ್ಣ ಸಹಕಾರ ನೀಡಿದರು.

10 ಗಂಟೆಯೊಳಗೆ ಮಾತ್ರ ಅಗತ್ಯ ವಸ್ತುಗಳ ಅಂಗಡಿಗೆ ಅನುಮತಿ ನೀಡಿದ್ದ ಕಾರಣ ಮಾಂಸ ದಂಗಡಿಗಳಲ್ಲಿ ಖರೀದಿ ಜೋರಾಗಿತ್ತು. ದಿನಸಿ ಅಂಗಡಿ, ತರಕಾರಿ ಅಂಗಡಿಗಳಲ್ಲಿ ಜನರು ತರಾತುರಿಯಲ್ಲಿ ವಸ್ತುಗಳನ್ನು ಖರೀದಿ ಮಾಡುತ್ತಿದ್ದ ದೃಶ್ಯ ಕಂಡು ಬಂತು.

ಪೊಲೀಸರಿಂದ ದಂಡ: 10 ಗಂಟೆಯ ನಂತರ ಕೆ.ಎಂ.ದೊಡ್ಡಿಯಲ್ಲಿ ಅನಗತ್ಯವಾಗಿ ಬೈಕ್‍ಗಳಲ್ಲಿ ಸಂಚಾರ ಮಾಡುತ್ತಿದ್ದ ಮತ್ತು ಕೊರೊನಾ ನಿಯಮಗಳನ್ನು ಪಾಲಿಸದ ಸಾರ್ವಜನಿಕರಿಗೆ ಹಾಗೂ 10 ಗಂಟೆಯ ನಂತರ ಅಂಗಡಿ ಬಾಗಿಲು ಮುಚ್ಚದಿರುವ ಕೆಲವು ಅಂಗಡಿ ಮಾಲೀಕರಿಗೆ ಪೊಲೀಸರು ದಂಡ ವಿಧಿಸುವ ಮೂಲಕ ಸರ್ಕಾರದ ಮಾರ್ಗಸೂಚಿ ಗಳನ್ನು ಅನುಸರಿಸುವಂತೆ ಜಾಗೃತಿ ಮೂಡಿಸಿದರು.