ಕೊರೊನಾ ಕಫ್ರ್ಯೂಗೆ ಕೊಡಗಲ್ಲಿ ಉತ್ತಮ ಸ್ಪಂದನೆ

ಮಡಿಕೇರಿ, ಏ.23- ಕೋವಿಡ್ ಮಾರ್ಗಸೂಚಿ ಅನ್ವಯ ಜಾರಿಗೆ ತರಲಾಗಿರುವ ಕೊರೊನಾ ಕಫ್ರ್ಯೂಗೆ ಕೊಡಗು ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಬೆಳಗೆ 6 ರಿಂದ 10 ಗಂಟೆಯವರೆಗೆ ಆಹಾರ, ದಿನಸಿ, ಹಣ್ಣು ಹಂಪಲು, ತರಕಾರಿ, ಹಾಲಿನ ಉತ್ಪನ್ನಗಳು ಮಾರಾಟ ಮಳಿಗೆಯನ್ನು ತೆರೆಯಲು ಮತ್ತು ಸಾರ್ವಜನಿಕರಿಗೆ ಅದನ್ನು ಕೊಂಡುಕೊಳ್ಳಲು ಕಾಲಾವಕಾಶ ನೀಡಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರು ಅಗ್ತಯ ವಸ್ತುಗಳನ್ನು ಖರೀದಿಸುತ್ತಿದ್ದುದು ಕಂಡು ಬಂತು. 10 ಗಂಟೆಯ ಬಳಿಕ ಎಲ್ಲಾ ಅಂಗಡಿ ಮುಂಗಟ್ಟುಗಳು ಬಾಗಿಲು ಎಳೆದುಕೊಂಡು ಮಾರ್ಗಸೂಚಿ ಪಾಲಿಸಿದವು.
ಮಡಿಕೇರಿ, ಕುಶಾಲನಗರ, ವಿರಾಜಪೇಟೆ, ಸೋಮವಾರಪೇಟೆ ಸೇರಿದಂತೆ ಎಲ್ಲೆಡೆ 10 ಗಂಟೆಯ ವೇಳೆಗೆ ಭಾಗಶಃ ಸ್ಥಬ್ದವಾಗಿವೆ. ಸರಕಾರಿ ಕಚೇರಿಗಳು, ಬ್ಯಾಂಕ್‍ಗಳು, ಮೆಡಿಕಲ್ ಶಾಪ್‍ಗಳು, ಖಾಸಗಿ ಕ್ಲಿನಿಕ್, ಖಾಸಗಿ ಆಸ್ಪತ್ರೆಗಳು ಎಂದಿನಂತೆ ತೆರೆದಿದ್ದವು. ಆದರೆ ಜನರಿಲ್ಲದೇ ಕಚೇರಿಗಳು ಖಾಲಿ ಹೊಡೆಯುತ್ತಿದ್ದುದು ಕಂಡು ಬಂತು.

ತುರ್ತು ಸಂಚಾರಕ್ಕೆ ಅವಕಾಶ ನೀಡಿ ಉಳಿದ ಎಲ್ಲ ರೀತಿಯ ವಾಹನ ಸಂಚಾರವನ್ನು ಬಂದ್ ಮಾಡಿದ್ದ ಹಿನ್ನಲೆಯಲ್ಲಿ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಪೊಲೀಸರು ನಗರ ಪಟ್ಟಣ ವ್ಯಾಪ್ತಿಯಲ್ಲಿ ಗಸ್ತು ತಿರುಗುವ ಮೂಲಕ ಸಾರ್ವಜನಿಕರು ಮತ್ತು ವಾಹನಗಳ ಅನಗತ್ಯ ಓಡಾಟಕ್ಕೆ ಬ್ರೇಕ್ ಹಾಕಿದ್ದರು. ಪೆಟ್ರೋಲ್ ಬಂಕ್‍ಗಳು ತೆರೆದಿದ್ದರೂ ವಾಹನ ವ್ಯಾಪಾರ ವಹಿವಾಟು ಎಂದಿನಂತೆ ಕಂಡು ಬರಲಿಲ್ಲ. ಪೆಟ್ರೋಲಿಯಂ, ಅಡುಗೆ ಅನಿಲ, ಹಾಲು, ದಿನಸಿ ಸಾಮಾಗ್ರಿ, ಕಟ್ಟಡ ಕಾಮಗಾರಿ, ಸರಕು ವಾಹನ ಸೇರಿದಂತೆ ಅಗತ್ಯ ವಸ್ತುಗಳ ಸೇವೆ ನೀಡುವ ವಾಹನಗಳು ಎಂದಿನಂತೆ ಸಂಚರಿಸಿದವು. ಜಿಲ್ಲೆಯಲ್ಲಿ ಖಾಸಗಿ ಹಾಗೂ ಕೆ.ಎಸ್.ಆರ್.ಟಿ.ಸಿ ಬಸ್‍ಗಳ ಸಂಚಾರ ಕೂಡ ಸಂಪೂರ್ಣ ಬಂದ್ ಆಗಿತ್ತು.