ಶ್ರೀಮಂಗಲದಲ್ಲಿ ರೈತ ಸಂಘ ಸದಸ್ಯತ್ವ ಅಭಿಯಾನ ರೈತರ ಬೆಳೆಗೆ ಬೆಂಬಲ ಬೆಲೆ ನೀಡಲು ಸರ್ಕಾರ ವಿಫಲ

ವಿರಾಜಪೇಟೆ, ಆ.28- ದೇಶದ ಬೆನ್ನೆಲುಬು ರೈತಾಪಿ ವರ್ಗವು ತನ್ನ ಹೊಲದಲ್ಲಿ ಶ್ರಮವನ್ನು ಭೂತಾಯಿಗೆ ಅರ್ಪಿಸಿ ಬೆಳೆಯನ್ನು ಪಡೆಯುತ್ತಾರೆ. ಆದರೆ ರೈತರಿಗೆ ಬೆಂಬಲ ಬೆಲೆ ನೀಡಲು ಸರ್ಕಾರ ವಿಫಲವಾಗಿರುವುದರಿಂದ ಹೋರಾಟದ ಹಾದಿ ಹಿಡಿಯಬೇಕಾ ಗಿದೆ ಎಂದು ರಾಜ್ಯ ರೈತ ಸಂಘದ ಮೈಸೂರು ಘಟಕದ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು ಹೇಳಿದರು.

ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕದ ಆಶ್ರಯದಲ್ಲಿ ಶ್ರೀಮಂಗಲ ವಿ.ಎಸ್.ಎಸ್.ಎನ್ ಸಭಾಂಗಣದಲ್ಲಿ ಏರ್ಪಡಿಸಿದ್ದ ರೈತ ಸಂಘಕ್ಕೆ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಅವರು, ದೇಶವನ್ನು ಕಾಯುವ ಸೈನಿಕರು ಎಷ್ಟು ಪ್ರಧಾನವೋ ದೇಶಕ್ಕೆ ರೈತ ಬಾಂಧವರ ಶ್ರಮ ಅಷ್ಟೇ ಮುಖ್ಯವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲ ವಾಗಿವೆ. ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ನೀಡುವಂತೆ ಹಲವು ಬಾರಿ ಹೋರಾಟ ನಡೆಸಿದರೂ ಸರ್ಕಾರ ವಿಫಲವಾಗಿದೆ. ಮುಂದಿನ ದಿನದಲ್ಲಿ ರೈತರುಗಳೆಲ್ಲ ಸಂಘಟಿತರಾಗಿ ಬೇಡಿಕೆಗಳನ್ನು ಈಡೇರಿಸು ವಂತೆ ಸರ್ಕಾರವನ್ನು ಒತ್ತಾಯಿಸುವುದಾಗಿ ಹೇಳಿದರು.

ಕೊಡಗು ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಚೊಟ್ರೊ ಮಾಡ ಸುಜೈ ಬೋಪಯ್ಯ ಅವರು ಪ್ರಾಸ್ತಾವಿಕ ಭಾಷಣದಲ್ಲಿ, ಕೊಡಗು ಜಿಲ್ಲೆಯಲ್ಲಿ ರೈತರು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕಾಡಾನೆ ಹಾವಳಿ, ವನ್ಯಮೃಗಗಳ ಉಪಟಳ, ಅಕಾಲಿಕ ಮಳೆ, ಹೀಗೆ ಹಲವಾರು ಸಮಸ್ಯೆಗಳಿದ್ದು. ರೈತ ಸಂಘದ ಬಲವರ್ಧನೆ ಗಾಗಿ ಕೊಡಗಿನ ಎಲ್ಲಾ ಭಾಗಗಳಲ್ಲಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ನಡೆಸುತ್ತಿರುವುದಾಗಿ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮಾತನಾಡಿ, ಕೊಡಗಿನಲ್ಲಿ ಸತತವಾಗಿ ಮೂರು ವರ್ಷಗಳಿಂದ ರೈತವರ್ಗ, ಕಾಫಿ ಬೆಳೆಗಾರರಿಗೆ ಭೂಕುಸಿತ ಅಕಾಲಿಕ ಮಳೆ, ಕಾಡಾನೆ ದಾಳಿಯಿಂದ ಬೆಳೆನಷ್ಟ ಪ್ರಾಣ ಹಾನಿ, ಸಾಕು ಪ್ರಾಣಿಗಳ ಬಲಿ ಹೀಗೆ ಹಲವು ನಷ್ಟ ಉಂಟಾಗಿದ್ದು, ಸರ್ಕಾರ ಗಳು ರೈತರಿಗೆ ಅಲ್ಪ ಮೊತ್ತವನ್ನು ಪರಿಹಾರವಾಗಿ ಪಾವತಿ ಮಾಡುತ್ತಿದೆ. ಜಿಲ್ಲೆಯಲ್ಲಿ ಕಾರ್ಮಿಕರ ಸಮಸ್ಯೆಯಿಂದಾಗಿ ಹೊರ ರಾಜ್ಯಗಳ ಕಾರ್ಮಿಕರನ್ನು ಆಶ್ರಯಿಸುವಂತಾಗಿದೆ. ಬೆಳೆಹಾನಿ ಹೊಂದಿರುವ ರೈತರಿಗೆ ಸೂಕ್ತ ಪರಿಹಾರ ಒದಗಿಸಲು ರಾಜ್ಯ ಸರ್ಕಾರ ಚಿಂತನೆ ಮಾಡಬೇಕು ಹಾಗೂ ಸಂಕಷ್ಟದಲ್ಲಿರುವ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಂತೆ ರೈತ ಸಂಘ ಒತ್ತಾಯಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀಮಂಗಲ, ಬಿ.ಶೆಟ್ಟಿಗೇರಿ ಮತ್ತು ಕುಂದಾ ಗ್ರಾಮ ವ್ಯಾಪ್ತಿಯಲ್ಲಿರುವ 100 ಕ್ಕೂ ಅಧಿಕ ಮಂದಿ ರೈತರು ರಾಜ್ಯ ರೈತ ಸಂಘದ ಸದಸ್ಯತ್ವ ಹೊಂದಿದರು. ನೂತನ ಸದಸ್ಯರಿಗೆ ಸಂಘದ ಪದಾಧಿಕಾರಿಗಳು ಶಾಲು ಹೊದಿಸಿ ಬರಮಾಡಿಕೊಂಡರು. ಪ್ರಮುಖರು ನೂತನವಾಗಿ ಸೇರ್ಪಡೆಗೊಂಡ ಸದಸ್ಯರಿಗೆ ಪ್ರಮಾಣ ವಚನ ಬೋಧನೆ ಮಾಡಿದರು. ಕರ್ನಾಟಕ ರೈತ ಸಂಘ ಮೈಸೂರು ಪ್ರಾಂತ ಕೆಂಪುಗೌಡ ಮತ್ತು ಕೊಡಗು ಜಿಲ್ಲಾ ಘಟಕದ ಪುಚ್ಚಿಮಂಡ ಸುಭಶ್ ಪ್ರಮುಖರು ಮಾತನಾಡಿದರು.

ವಿರಾಜಪೇಟೆ ತಾಲೂಕು ಅಧ್ಯಕ್ಷ ಬಾಚಮಾಡ ರವಿಕುಮಾರ್, ಪೊನ್ನಂಪೇಟೆ ಹೊಬಳಿಯ ಅಲೆಮಾಡ ಮಂಜುನಾಥ್, ಹುದಿಕೇರಿ ಹೊಬಳಿಯ ಚಂಗುಲಂಡ ಸೂರಜ್, ಶ್ರಿಮಂಗಲ ಹೊಬಳಿಯ ಚಟ್ಟಂಗಡ ಕಂಧಾ ಕಾರ್ಯಪ್ಪ, ತಿತಿಮತಿ ಮಾಯಮುಡಿ ಹೊಬಳಿಯ ರಾಯ್ ಮೇದಪ್ಪ, ಪೊನ್ನಂಪೇಟೆ ವಲಯ ಅಧ್ಯಕ್ಷ ಚೊಟ್ಟೆಕಾಳಪಂಡ ಮನು, ಪ್ರಮುಖರಾದ ಅಪ್ಪಚಂಗಡ ಮಾದಯ್ಯ ಸೇರಿದಂತೆ ಕೊಡಗು ಜಿಲ್ಲಾ ರೈತ ಸಂಘದ ವಿವಿಧ ಘಟಕದ ಪಧಾದಿಕಾರಿಗಳು ಹಾಜರಿದ್ದರು.