ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್

ಬೆಂಗಳೂರು,ಜ.10-ರಾಜ್ಯ ಸಚಿವ ಸಂಪುಟ ವಿಸ್ತ ರಣೆಗೆ ಬಿಜೆಪಿ ಹೈಕಮಾಂಡ್ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಗ್ರೀನ್ ಸಿಗ್ನಲ್ ನೀಡಿದ್ದು, 7 ಶಾಸಕರಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸಲು ಅನು ಮತಿ ನೀಡಲಾಗಿದೆ. ನೂತನ ಸಚಿವರು ಸಂಕ್ರಾಂತಿಗೂ ಮುನ್ನಾ ದಿನ ಅಂದರೆ ಜನವರಿ 13ರಂದು ಮಧ್ಯಾಹ್ನ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.

ಹೈಕಮಾಂಡ್ ಬುಲಾವ್ ಮೇರೆಗೆ ಭಾನುವಾರ ಬೆಳಗ್ಗೆ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿಗಳು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿ ರಾತ್ರಿ 10.20ಕ್ಕೆ ಬೆಂಗಳೂರಿಗೆ ಹಿಂತಿ ರುಗಿದರು. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಯಡಿಯೂರಪ್ಪ, ಸಂಪುಟ ವಿಸ್ತರಣೆಗೆ ವರಿಷ್ಠರು ಅನುಮತಿ ನೀಡಿದ್ದಾರೆ. 6-7 ಮಂದಿಯನ್ನು ಸಂಪುಟದಲ್ಲಿ ಸೇರಿಸಿಕೊಳ್ಳಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ನೂತನ ಸಚಿವರ ಪಟ್ಟಿಯನ್ನು ನಾಳೆ (ಸೋಮವಾರ) ಬಿಡುಗಡೆ ಮಾಡಲಾಗುವುದು. ನೂತನ ಸಚಿವರು ಜ. 13ರಂದು ಮಧ್ಯಾಹ್ನ ಪದವಿ ಪ್ರಮಾಣ ಸ್ವೀಕರಿಸಲಿದ್ದು, ಈ ಸಮಾರಂಭಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಆಗಮಿಸಬೇಕೆಂಬುದು ನಮ್ಮ ಅಭಿಲಾಷೆಯಾಗಿದೆ. ಅದಕ್ಕಾಗಿ ಅವರ ಸಮಯವನ್ನು ಕೇಳಲಾಗುವುದು ಎಂದರು.

ಇದಕ್ಕೂ ಮುನ್ನ ದೆಹಲಿಯಲ್ಲಿ ವರಿಷ್ಠರ ಭೇಟಿ ನಂತರ ಸುದ್ದಿಗಾರರ ಜೊತೆ ಮಾತನಾಡಿದ್ದ ಯಡಿಯೂರಪ್ಪ, ಸಂಪುಟ ವಿಸ್ತರಣೆಯೋ ಅಥವಾ ಪುನಾರಚನೆಯೋ ಎಂಬುದರ ಬಗ್ಗೆ ವರಿಷ್ಠರು ತೀರ್ಮಾನಿಸುತ್ತಾರೆ. ಶೀಘ್ರದಲ್ಲೇ ಸಿಹಿ ಸುದ್ದಿ ನೀಡುತ್ತಾರೆ ಎಂದು ಹೇಳಿದ್ದರೆ ಹೊರತು ಸಂಪುಟ ವಿಸ್ತರಣೆ ಬಗ್ಗೆ ಸ್ಪಷ್ಟವಾಗಿ ಏನನ್ನೂ ಹೇಳಿರಲಿಲ್ಲ.

ಆದರೆ, ಅವರು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿ ತಮ್ಮ ನಿವಾಸಕ್ಕೆ ಹೊರಡುತ್ತಿದ್ದಂತೆಯೇ ವರಿಷ್ಠರಿಂದ ಅವರ ಮೊಬೈಲ್‍ಗೆ ಕರೆ ಬಂದಿತ್ತು. ತಮ್ಮ ಕಾರನ್ನು ನಿಲ್ಲಿಸಿ ಚಾಲಕನನ್ನು ಕೆಳಗಿಳಿಸಿ ಮಾತನಾಡಿದ ನಂತರ ಅವರು, ಸಂಪುಟ ವಿಸ್ತರಣೆ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದರು. ಯಡಿಯೂರಪ್ಪ ಬೆಂಗಳೂರಿಗೆ ತಲುಪಿದ ನಂತರ ಅವರ ಮೊಬೈಲ್‍ಗೆ ಕರೆಮಾಡಿದ ವರಿಷ್ಠರು ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ನೀಡಿದರು ಎಂದು ಹೇಳಲಾಗಿದೆ.

ಇದಕ್ಕೂ ಮುನ್ನಾ ಬೆಳಗ್ಗೆ ದೆಹಲಿಗೆ ವಿಶೇಷ ವಿಮಾನದಲ್ಲಿ ತೆರಳಿದ್ದ ಯಡಿಯೂರಪ್ಪ ಅವರು, ಜೆ.ಪಿ.ನಡ್ಡಾ, ಅಮಿತ್ ಶಾ ಮತ್ತು ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿದಾಗ ವರಿಷ್ಠರು ಮುಖ್ಯಮಂತ್ರಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡರು ಎಂದು ಹೇಳಲಾಗಿದೆ. ಈ ವೇಳೆ ಯಡಿಯೂರಪ್ಪ ಅವರು, ರಾಜ್ಯದಲ್ಲಿ ನಡೆದ ಗ್ರಾಮ ಪಂಚಾಯತಿ ಚುನಾ ವಣೆಯಲ್ಲಿ ಬಿಜೆಪಿ ಮಾಡಿರುವ ಸಾಧನೆ ಬಗ್ಗೆ ವರಿಷ್ಠರಿಗೆ ವಿವರಿಸಿದ್ದಾರೆ. ಬಾಗಲಕೋಟೆ ಲೋಕಸಭಾ ಕ್ಷೇತ್ರ, ಮಸ್ಕಿ ಮತ್ತ ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪ ಚುನಾಣೆಗೆ ಸದ್ಯದಲ್ಲೇ ಅಧಿಸೂಚನೆ ಹೊರಡಲಿದ್ದು, ಅಭ್ಯರ್ಥಿಗಳನ್ನು ಪಟ್ಟಿಯನ್ನು ಅಂತಿಮಗೊಳಿಸುತ್ತೇವೆ. ಮೂರೂ ಕ್ಷೇತ್ರಗಳಲ್ಲೂ ಪಕ್ಷ ಗೆಲ್ಲುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದು ವರಿಷ್ಠರು ಮುಕ್ಯಮಂತ್ರಿಗಳಿಗೆ ತಿಳಿಸಿದರು ಎಂದಹ ಹೇಳಲಾಗಿದೆ. ಕೃಷಿ ಸಂಬಂಧಿತ ಕಾಯ್ದೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕು, ಅಭಿವೃದ್ಧಿ ಯೋಜನೆಗಳನ್ನು ತ್ವರಿತವಾಗಿ ಜನರಿಗೆ ತಲುಪಿಸಬೇಕು, ಕೃಷಿ ಇನ್ನಿತರ ಕಾಯ್ದೆಗಳ ಜಾಗೃತಿ ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರನ್ನು ಗುರುತಿಸಿ ಪ್ರೋತ್ಸಾ ಹಿಸಬೇಕು ಎಂದು ವರಿಷ್ಠರು ಮುಖ್ಯಮಂತ್ರಿಗಳಿಗೆ ನಿರ್ದೇಶನ ನೀಡಿದ್ದರು.