ಮೃಗಾಲಯ ಸಿಬ್ಬಂದಿಗೆ ಬ್ಯಾಂಕ್ ಆಫ್ ಬರೋಡದಿಂದ ದಿನಸಿ ಕಿಟ್

ಮೈಸೂರು, ಜೂ.29(ಎಂಕೆ)- ಬ್ಯಾಂಕ್ ಆಫ್ ಬರೋಡಾದಿಂದ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯ ಸಿಬ್ಬಂದಿಗೆ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ನೇತೃತ್ವದಲ್ಲಿ ಅಕ್ಕಿ, ಬೆಳೆ, ಸಕ್ಕರೆ ಇನ್ನಿತರೆ ಆಹಾರ ಪದಾರ್ಥಗಳಿರುವ ದಿನಸಿ ಕಿಟ್‍ಗಳನ್ನು ವಿತರಿಸಲಾಯಿತು.

ಬಳಿಕ ಮಾತನಾಡಿದ ಎಲ್.ಆರ್.ಮಹದೇವಸ್ವಾಮಿ, ಮೈಸೂರು ಮಹಾರಾಜರ ಕೊಡುಗೆಯಿಂದ ಜನಸಾಮಾನ್ಯರು ವಿವಿಧ ಬಗೆಯ ಪ್ರಾಣಿ-ಪಕ್ಷಿಗಳನ್ನು ವೀಕ್ಷಣೆ ಮಾಡುವ ಅವಕಾಶ ಲಭಿಸಿದೆ. ಕೊರೊನಾ ಸೋಂಕಿನಿಂದಾಗಿ ಮೃಗಾಲಯಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯಾದರೂ ಹಲವರು ತಮ್ಮ ಇಷ್ಟದ ಪ್ರಾಣಿಗಳನ್ನು ದತ್ತು ಪಡೆದು ಹಾಗೂ ಉದ್ಯಮಿಗಳು ಸಿಎಸ್‍ಆರ್ ಫಂಡ್ ನೀಡಿ ಪ್ರಾಣಿ ಸಂಕುಲಗಳ ಸಂರಕ್ಷಣೆಗೆ ಸಹಕರಿಸಿದ್ದಾರೆ ಮೆಚ್ಚುಗೆ ವ್ಯಕ್ತಪಡಿಸಿದರು.

ಬರೋಡಾ ಬ್ಯಾಂಕ್‍ನ ವಲಯ ಪ್ರಧಾನ ರೀಜಿನಲ್ ಮ್ಯಾನೇಜರ್ ಸುಧಾಕರ ನಾಯಕ್ ಮಾತನಾಡಿ, ಬರೋಡಾ ಬ್ಯಾಂಕಿನ ಸಿಎಸ್‍ಆರ್ ಫಂಡ್‍ನಿಂದ 2 ಲಕ್ಷಕ್ಕೂ ಹೆಚ್ಚು ಹಣವನ್ನು ಸಮಾಜಕ್ಕೆ ಮೀಸಲಿಟ್ಟಿದ್ದೇವೆ. ಬ್ಯಾಂಕಿನ ಪ್ರಾದೇಶಿಕ ಕಚೇರಿ ಮೈಸೂರಿನಲ್ಲಿ ಉದ್ಘಾಟನೆ ಗೊಂಡಿದ್ದರ ಪ್ರಯುಕ್ತ ಮೃಗಾಲಯ ಸಿಬ್ಬಂದಿಗಳಿಗೆ ದಿನಸಿ ಕಿಟ್ ವಿತರಿಸಲಾಗುತ್ತಿದೆ ಎಂದರು. ಮೃಗಾಲಯ ಪ್ರಾಧಿಕಾರದ ನಿರ್ದೇಶಕ ಅಜಿತ್ ಕುಲಕರ್ಣಿ, ಬ್ಯಾಂಕ್ ಆಫ್ ಬರೋಡ ಮ್ಯಾನೇಜರ್ ಮುರಳಿಕೃಷ್ಣ, ಲೋಕೇಶ್, ರಾಮಚಂದ್ರಪ್ಪ, ರಘು, ಮೃಗಾಲಯ ಪ್ರಾಧಿಕಾರದ ಸದಸ್ಯ ಗೋಕುಲ್ ಗೋವರ್ಧನ್, ಜ್ಯೋತಿ ರೇಚಣ್ಣ ಉಪಸ್ಥಿತರಿದ್ದರು.