ಜಿಟಿಡಿ, ಪುಟ್ಟರಾಜು ಬೆಂಬಲಿಗರು, ಜೆಡಿಎಸ್ ಮುಖಂಡರ ಆಕ್ರೋಶ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (ಈಗ ಮಾಜಿ) ಅವರನ್ನು ಮಣ ಸಿದ್ದ ಜಿ.ಟಿ. ದೇವೇಗೌಡ ಅವರಿಗೆ ಪ್ರಮುಖ ಖಾತೆ ಲಭಿಸುವ ನಿರೀಕ್ಷೆಯ ಲ್ಲಿದ್ದ ಅವರ ಬೆಂಬಲಿಗರು ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಈಗ ಅವರಿಗೆ ಉನ್ನತ ಶಿಕ್ಷಣ ಖಾತೆ ನೀಡಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಹಾಗೂ ಪ್ರಭಾವಿ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ 30 ಸಾವಿರಕ್ಕೂ ಅಧಿಕ ಮತಗಳಿಂದ ಜಯ ಸಾಧಿಸಿದ್ದ ಜಿ.ಟಿ. ದೇವೇಗೌಡರಿಗೆ ಸಹಜವಾಗಿಯೇ ಪ್ರಬಲ ಖಾತೆ ಸಿಗುವ ಬಗ್ಗೆಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಭಾರೀ ನಿರೀಕ್ಷೆ ಇತ್ತು. ಆದರೆ ಈಗ ಉನ್ನತ ಶಿಕ್ಷಣ ಖಾತೆ ನೀಡಿರುವುದರಿಂದ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.

ಚುನಾವಣೆಯ ಸಂದರ್ಭದಲ್ಲಿ ಹಾಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರ ನಡೆಸುವಾಗ “ಜಿ.ಟಿ. ದೇವೇಗೌಡರನ್ನು ಗೆಲ್ಲಿಸಿಕೊಡಿ, ಅವರಿಗೆ ಮುಖ್ಯಮಂತ್ರಿ ಸಮಾನ ಅಧಿಕಾರ ಕೊಡುತ್ತೇನೆ” ಎಂದು ಹಳ್ಳಿ ಹಳ್ಳಿಯಲ್ಲಿ ಸಾರಿದ್ದರು. ಆದರೆ, ಈಗ ಮಾತಿಗೆ ತಪ್ಪಿದ್ದಾರೆ. ಅಷ್ಟೇನೂ ಪ್ರಮುಖವಲ್ಲದ ಉನ್ನತ ಶಿಕ್ಷಣ ಖಾತೆ ನೀಡುವ ಮೂಲಕ ಜಿ.ಟಿ. ದೇವೇಗೌಡರನ್ನು ಮೂಲೆಗುಂಪು ಮಾಡುವ ಸಂಚು ನಡೆಯುತ್ತಿದೆ ಎಂದು ಜಿಡಿಎಸ್ ರಾಜ್ಯ ಸಮಿತಿ ಸದಸ್ಯ ಟಿ. ನಾರಾಯಣ್, ಮೈಸೂರು ತಾಲೂಕು ಎಪಿಎಂಸಿ ಅಧ್ಯಕ್ಷ ಸಿದ್ದೇಗೌಡ, ಮೈಸೂರು ನಗರ ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಟಿಡಿ ಮನೆ ಮುಂದೆ ಧರಣ : ಉನ್ನತ ಶಿಕ್ಷಣ ಖಾತೆಯನ್ನು ಒಪ್ಪಿಕೊಳ್ಳಬಾರದೆಂದು ಜಿ.ಟಿ.ದೇವೇಗೌಡರನ್ನು ಆಗ್ರಹಿಸಿ ನಾಳೆ (ಶನಿವಾರ) ಬೆಳಿಗ್ಗೆ 9.30ಕ್ಕೆ ಮೈಸೂರಿನ ವಿಜಯನಗರದ ಕಾಳಿದಾಸ ರಸ್ತೆಯಲ್ಲಿರುವ ಅವರ ಮುನೆ ಮುಂದೆ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು ಹಾಗೂ ಜಿಟಿಡಿ ಬೆಂಬಲಿಗರು ಧರಣ ನಡೆಸಲು ನಿರ್ಧರಿಸಿದ್ದಾರೆ. ಈ ಮಧ್ಯೆ ಜಿಟಿಡಿ ಅವರಿಗೆ ಪ್ರಬಲ ಖಾತೆಯನ್ನು ನೀಡದಿರುವುದನ್ನು ಖಂಡಿಸಿ ಮೈಸೂರು ಜಿಲ್ಲಾ ಜೆಡಿಎಸ್ ವಕ್ತಾರ ದೂರ ಮಂಜುನಾಥ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.

ಮಂಡ್ಯ ವರದಿ: ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಣ್ಣ ನೀರಾವರಿ ಖಾತೆ ನೀಡಿರುವುದಕ್ಕೆ ಮೇಲುಕೋಟೆ ಕ್ಷೇತ್ರದ ಶಾಸಕ ಹಾಗೂ ಸಚಿವ ಸಿ.ಎಸ್.ಪುಟ್ಟರಾಜು ಬೆಂಬಲಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ ವಿಧಾನಸಭಾ ಚುನಾ ವಣೆಯಲ್ಲಿ ಮಂಡ್ಯ ಜಿಲ್ಲೆಯ 7 ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಭಾರೀ ಅಂತರದಲ್ಲಿ ಜಯ ಗಳಿಸುವಲ್ಲಿ ಹಾಗೂ ಸರ್ಕಾರ ರಚನೆಯಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದ ಸಿ.ಎಸ್.ಪುಟ್ಟರಾಜು ಅವರಿಗೆ ಸಮ್ಮಿಶ್ರ ಸರ್ಕಾರದಲ್ಲಿ ಪ್ರಬಲ ಖಾತೆ ನಿರೀಕ್ಷೆಯಲ್ಲಿದ್ದರು. ಆದರೆ ಸಣ್ಣ ನೀರಾವರಿಯಂತಹ ಅಷ್ಟೇನು ಮಹತ್ವವಲ್ಲದ ಖಾತೆ ನೀಡಿರುವುದು ಪುಟ್ಟರಾಜು ಬೆಂಬಲಿಗರಲ್ಲಿ ಸಹಜವಾಗಿ ಅತೃಪ್ತಿ ಮೂಡಿಸಿದೆ. ಪಕ್ಷದ ವರಿಷ್ಠರ ನಿಲುವು ವಿರೋಧಿಸಿ ಪ್ರತಿಭಟನೆಗಿಳಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ.