ನಾಳೆಯಿಂದ ಅರ್ಬನ್ ಹಾತ್‍ನಲ್ಲಿ ಹಸ್ತಶಿಲ್ಪ ಪ್ರದರ್ಶನ

ಮೈಸೂರು, ಜ.27(ಎಂಟಿವೈ)- ಮೈಸೂರಿನ ರಿಂಗ್ ರಸ್ತೆಯ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ ಜ. 29 ರಿಂದ ಫೆ. 7ರವರೆಗೆ ಗಾಂಧಿ ಶಿಲ್ಪ ಬಜಾರ್ ಅಖಿಲ ಭಾರತ ಹಸ್ತಶಿಲ್ಪ ಪ್ರದರ್ಶನ ಹಾಗೂ ಮಾರಾಟ ಮೇಳ ಆಯೋಜಿಸಲಾಗಿದೆ ಎಂದು ಜೆಎಸ್‍ಎಸ್ ತಾಂತ್ರಿಕ ಶಿಕ್ಷಣ ವಿಭಾಗದ ಜಂಟಿ ನಿರ್ದೇಶಕ ಡಾ.ಎಚ್.ಆರ್. ಮಹದೇವಸ್ವಾಮಿ ತಿಳಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.29ರಂದು ಸಂಜೆ 4ಕ್ಕೆ ಗಾಂಧಿ ಶಿಲ್ಪ ಬಜಾರ್ ಅಖಿಲ ಭಾರತ ಹಸ್ತಶಿಲ್ಪ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಸಂಸದ ಪ್ರತಾಪ್‍ಸಿಂಹ ಉದ್ಘಾಟಿಸಲಿ ದ್ದಾರೆ. ಶಾಸಕ ಜಿ.ಟಿ.ದೇವೇಗೌಡ ಅಧ್ಯಕ್ಷತೆ ವಹಿಸಲಿರುವ ಕಾರ್ಯಕ್ರಮದಲ್ಲಿ ಶಾಸಕ ಎಲ್.ನಾಗೇಂದ್ರ, ಜೆಎಸ್‍ಎಸ್ ವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರ ಮಠ್ ಇನ್ನಿತರರು ಪಾಲ್ಗೊಳ್ಳಲಿದ್ದಾರೆ ಎಂದರು.

ಈ ಮೇಳದಲ್ಲಿ ಮರದ ಕೆತ್ತನೆ, ಶಿಲಾ ಶಿಲ್ಪ, ಕಂಚಿನ ವಿಗ್ರಹ, ಮರದ ಕುಂದಣ ಕಲೆ, ಟೆರ್ರಾಕೋಟಾ, ರತ್ನಗಂಬಳಿ, ಹತ್ತಿ ಜಮಖಾನ, ಅನುಕರಣೆ ಆಭರಣಗಳು, ಮರದ ಅರಗಿನ ಕಲಾ ವಸ್ತುಗಳು, ಬಾಟಿಕ್, ಕಲಾಂಕರಿ ಶಿಲ್ಪಕಲೆ, ಚರ್ಮದ ಆಕರ್ಷಕ ವಸ್ತುಗಳು, ಮೈಸೂರು ಶೈಲಿಯ ಚಿತ್ರಕಲೆ ಇನ್ನಿತರ ಅಲಂಕಾರಿಕೆ ಹಾಗೂ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಲಭ್ಯವಿರುತ್ತವೆ. ಮಧ್ಯವರ್ತಿಗಳಿಲ್ಲದೇ ನೇರವಾಗಿ ಕುಶಲ ಕರ್ಮಿಗಳಿಂದ ಗ್ರಾಹಕರಿಗೆ ದೊರಕುವ ಸೌಲಭ್ಯವಿರುವ ಕಾರಣ ಅತಿ ಕಡಿಮೆ ಬೆಲೆಗೆ ಉತ್ತಮ ವಸ್ತುಗಳ ದೊರೆಯುತ್ತಿವೆ ಎಂದು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಜೆಎಸ್‍ಎಸ್ ಅರ್ಬನ್ ಹಾತ್ ಯೋಜನಾಧಿಕಾರಿ ಎಂ.ಶಿವನಂಜಸ್ವಾಮಿ, ರಾಕೇಶ್‍ರೈ ಇದ್ದರು.