ಶಾಲಾ ಮಕ್ಕಳಲ್ಲಿ ಸಮನ್ವಯತೆ ತರಲು ‘ಹಾರ್ಮೊನಿ ಕ್ವಿಜ್’ ವಿಶೇಷ ಕಾರ್ಯಕ್ರಮ

ಮೈಸೂರು: ಸರ್ಕಾರಿ, ಖಾಸಗಿ ಹಾಗೂ ವಿಶೇಷ ಶಾಲೆಗಳ ಮಕ್ಕಳ ನಡುವೆ ಸಾಮರಸ್ಯ ಮೂಡಿಸಲು ಮೈಸೂರು ಅಮಿಟಿ ರೌಂಡ್ ಟೇಬಲ್ (ಮಾರ್ಟ್-156) ವತಿಯಿಂದ `ಹಾರ್ಮೊನಿ ಕ್ವಿಜ್ (ಸಾಮರಸ್ಯ ರಸಪ್ರಶ್ನೆ)’ ವಿಶೇಷ ಕಾರ್ಯಕ್ರಮ ರೂಪಿಸಲಾಗಿದ್ದು, ಜೂ.30ರಂದು ಈ ರಸಪ್ರಶ್ನೆ ಸ್ಪರ್ಧೆ ನಡೆಯಲಿದೆ ಎಂದು ಮಾರ್ಟ್-156ರ ನಿಕಟಪೂರ್ವ ಅಧ್ಯಕ್ಷ ಕಿರಣ್ ರಂಗ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನ ಎಕ್ಸೆಲ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಸ್ಪರ್ಧೆ ನಡೆಯಲಿದೆ. ಒಂದು ತಂಡದಲ್ಲಿ ಸಿಬಿಎಸ್‍ಸಿ ಪಠ್ಯಕ್ರಮದ ಖಾಸಗಿ ಶಾಲೆಯ ಇಬ್ಬರು, ವಿಶೇಷ ಶಾಲೆಗಳ ಇಬ್ಬರು ಹಾಗೂ ಸರ್ಕಾರಿ ಶಾಲೆಯ ಒಬ್ಬ ವಿದ್ಯಾರ್ಥಿ ಸೇರಿದಂತೆ ಐವರು ಮಕ್ಕಳು ಇರಲಿದ್ದು, ಇಂತಹ ಆರು ತಂಡಗಳನ್ನು ರಚನೆ ಮಾಡಲಾಗಿದೆ. ಈ ಮಕ್ಕಳು ತಮ್ಮ ತಂಡದ ಸದಸ್ಯರೊಂದಿಗೆ ಸಮಾಲೋಚಿಸಿ ಸ್ಪರ್ಧೆ ಎದುರಿಸಬೇಕಾಗುತ್ತದೆ ಎಂದು ಹೇಳಿದರು.

ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮೈಸೂರಿನ ಎಕ್ಸೆಲ್ ಪಬ್ಲಿಕ್ ಸ್ಕೂಲ್, ಇಲವಾಲ ಸರ್ಕಾರಿ ಶಾಲೆ, ವಿದ್ಯಾರಣ್ಯಪುರಂನ ಪುಟ್ಟವೀರಮ್ಮ ಶ್ರವಣ ದೋಷ ಮಕ್ಕಳ ವಸತಿ ಶಾಲೆಯ ಮಕ್ಕಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಜೂ.29ರಂದು ರಸಪ್ರಶ್ನೆ ಸ್ಪರ್ಧೆಯ ಪೂರ್ವಭಾವಿ ಸುತ್ತು ನಡೆಯಲಿದೆ. ಮಕ್ಕಳ ಸಾಮಾನ್ಯ ಜ್ಞಾನವನ್ನು ವೃದ್ಧಿಸುವ ಜೊತೆಗೆ ವಿವಿಧ ಹಿನ್ನೆಲೆಯ ಮಕ್ಕಳನ್ನು ಒಂದೇ ವೇದಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿ ಸಾಮರಸ್ಯದ ಸಂದೇಶ ನೀಡುವುದು ಈ ಸ್ಪರ್ಧೆಯ ಉದ್ದೇಶವಾಗಿದೆ. ತಂಡದ ಐವರು ಸದಸ್ಯರು ಸಮನ್ವಯದಿಂದ ಸ್ಪರ್ಧೆ ಎದುರಿಸಬೇಕಾಗುತ್ತದೆ ಎಂದು ವಿವರಿಸಿದರು.
6 ತಂಡಗಳ ನಡುವೆ 6 ಸುತ್ತುಗಳಲ್ಲಿ ಸ್ಪರ್ಧೆ ನಡೆಯಲಿದೆ. 1, 2 ಮತ್ತು 3ನೇ ಸ್ಥಾನ ಗಳಿಸಿದ ತಂಡಗಳಿಗೆ ಕ್ರಮವಾಗಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಬಹುಮಾನವಾಗಿ ನೀಡಲಾಗುವುದು. ಮಾರ್ಟ್-156ರ ವತಿಯಿಂದ ಕಳೆದ 4 ವರ್ಷಗಳ ಅವಧಿಯಲ್ಲಿ 25 ಶಾಲಾ ಕೊಠಡಿಗಳನ್ನು ನಿರ್ಮಿಸಿಕೊಡಲಾಗಿದೆ. ಅಸೋಸಿಯೇಶನ್ ಆಫ್ ರೌಂಡ್ ಟೇಬಲ್ ಇಂಡಿಯಾ-13ರ ಅಧೀನ ಸಂಘಟನೆಯಾದ ಮಾರ್ಟ್-156 ಒಂದು ದಶಕದಿಂದ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ ಎಂದು ನುಡಿದರು.

ಮಾರ್ಟ್-156ರ ಕಾರ್ಯದರ್ಶಿ ಚಿರಾಗ್ ಮೆಹ್ತಾ ಮಾತನಾಡಿ, ನಮ್ಮ ಸಂಘಟನೆ ದುರ್ಬಲ ವರ್ಗದ ಮತ್ತು ಅಂಗವಿಕಲ ಮಕ್ಕಳ ಉನ್ನತಿಗಾಗಿ ಸೇವಾ ಮನೋಭಾವದಿಂದ ಮುನ್ನಡೆಯುತ್ತಿದೆ. ಸಮಾಜದ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಸಮಾನ ಅವಕಾಶ ದೊರಕಬೇಕೆನ್ನುವುದು ನಮ್ಮ ಆಶಯವಾಗಿದೆ ಎಂದು ತಿಳಿಸಿದರು.