ಕೊಡಗಿನಲ್ಲಿ ಭಾರೀ ಮಳೆ

ಮಡಿಕೇರಿ,ಜೂ.14-ಕೊಡಗು ಜಿಲ್ಲೆಯಾದ್ಯಂತ ಸತತ 3ನೇ ದಿನವೂ ಗಾಳಿ ಸಹಿತ ಭಾರೀ ಮಳೆಯಾಗುತ್ತಿದೆ. ಸೋಮವಾರ ಬೆಳಗ್ಗಿನಿಂದಲೇ ಜಿಲ್ಲೆ ಯಲ್ಲಿ ದಟ್ಟ ಮಂಜು ಮುಸುಕಿದ ವಾತಾವರಣದ ನಡುವೆಯೇ ಮಳೆ ಸುರಿಯುತ್ತಿದ್ದು, ಮಂಗಳವಾರ ಕೂಡ ಜಿಲ್ಲೆಯಲ್ಲಿ
`ಆರೆಂಜ್ ಅಲರ್ಟ್’ ಘೋಷಣೆ ಮುಂದುವರೆದಿದೆ. ಜೂ.17ರವರೆಗೂ ಜಿಲ್ಲೆಯ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕೊಡಗು ಜಿಲ್ಲಾಡಳಿತ ಈಗಾಗಲೇ ಅಪಾಯಕಾರಿ ಪ್ರದೇಶದಲ್ಲಿ ನೆಲೆಸಿರುವ ಕುಟುಂಬಗಳಿಗೆ ಮಾನ್ಸೂನ್ ಎಚ್ಚರಿಕೆಯಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರವಾಗುವಂತೆ ನೋಟಿಸ್ ನೀಡಿದೆ.

ಇದೀಗ ಕೊಡಗು ಜಿಲ್ಲೆಯಲ್ಲಿ ಮುಂಗಾರು ಚುರುಕುಗೊಂಡ ಹಿನ್ನೆಲೆಯಲ್ಲಿ ಸಣ್ಣ-ಪುಟ್ಟ ಅನಾಹುತಗಳು ಘಟಿಸಿದ ಬಗ್ಗೆ ವರದಿಯಾಗಿದೆ. ನಗರದ ಆಂಜನೇಯ ದೇವಾಲಯದ ಬಳಿ ಬರೆ ಕುಸಿದು, ಚೇತನ್ ಎಂಬುವರ ಮನೆ ಹಾಗೂ ಕೊಟ್ಟಿಗೆಗೆ ಹಾನಿಯಾಗಿದೆ. ಮನೆಯ ಗೋಡೆ ಬಿರುಕು ಬಿಟ್ಟಿದ್ದು, ಕೊಟ್ಟಿಗೆಯ ಮೇಲ್ಚಾವಣಿಯ ಶೀಟ್‍ಗಳು ಒಡೆದು ಹೋಗಿವೆ. ಇನ್ನು ಮಡಿಕೇರಿ ಚೆಟ್ಟಳ್ಳಿ ರಸ್ತೆಯ ಕಡಗದಾಳು ಬಳಿ ರಸ್ತೆಗೆ ಅಡ್ಡಲಾಗಿ ಮರ ಉರುಳಿದ್ದು, ಕೆಲ ಕಾಲ ವಾಹನ ಸಂಚಾರ ಸ್ಥಗಿತವಾಗಿತ್ತು. ಮಡಿಕೇರಿ ವಲಯ ಅರಣ್ಯ ಇಲಾಖೆ ಸಿಬ್ಬಂದಿ ಮರ ತೆರವುಗೊಳಿಸಿ ರಸ್ತೆ ಸಂಚಾರ ಸುಗಮಗೊಳಿಸಿದರು.

ಮಡಿಕೇರಿ, ಮಕ್ಕಂದೂರು, ಮುಕ್ಕೋಡ್ಲು, ಹೆಬ್ಬೆಟ್ಟಗೇರಿ, ಮದೆನಾಡು, ಜೋಡುಪಾಲ, ಭಾಗಮಂಡಲ, ತಲಕಾವೇರಿ, ನಾಪೋಕ್ಲು, ಕಕ್ಕಬ್ಬೆ ಸೇರಿದಂತೆ ಬಹುತೇಕ ಕಡೆಗಳಲ್ಲಿ ಮಳೆ ಸುರಿದಿದೆ. ಕಾವೇರಿ ನದಿ ಪಾತ್ರದ ಗ್ರಾಮಗಳಲ್ಲಿ ಉತ್ತಮ ಮಳೆಯಾದ ಪರಿಣಾಮ ಬೇತ್ರಿ, ಕದನೂರು, ಕಾವೇರಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಭಾಗಮಂಡಲ ತಲಕಾವೇರಿ ವ್ಯಾಪ್ತಿಯ ಬ್ರಹ್ಮಗಿರಿ ಬೆಟ್ಟ ಶ್ರೇಣಿಯಲ್ಲೂ ಧಾರಾಕಾರ ಮಳೆಯಾದ ಹಿನ್ನೆಲೆಯಲ್ಲಿ ತ್ರಿವೇಣಿ ಸಂಗಮಗಳಲ್ಲಿ ನೀರಿನ ಮಟ್ಟ ಏರಿಕೆ ಕಂಡಿದೆ. ಸಂಗಮದಲ್ಲಿರುವ ನಾಗನಕಟ್ಟೆಯ ಮೆಟ್ಟಿಲಿನವರೆಗೆ ನೀರು ತುಂಬಿದೆ. ನದಿ ಪಾತ್ರಗಳ ಗದ್ದೆಗಳಲ್ಲಿ ಉಳುಮೆ ಕಾರ್ಯ ಕೂಡ ಆರಂಭವಾಗಿದ್ದು, ರೈತಾಪಿ ವರ್ಗ ಕೃಷಿ ಕಾರ್ಯಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ.
ಭಾಗಮಂಡಲದಲ್ಲಿ 95 ಮಿ.ಮೀ., ನಾಪೋಕ್ಲುವಿನಲ್ಲಿ 75 ಮಿ.ಮೀ., ಸಂಪಾಜೆ ಮತ್ತು ಶಾಂತಳ್ಳಿಯಲ್ಲಿ 71 ಮಿ.ಮೀ. ಮಳೆಯಾಗಿದೆ. ಕೊಡಗು ಜಿಲ್ಲೆಯಲ್ಲಿ ಈವರೆಗೆ 309 ಮಿ.ಮೀ. ಮಳೆಯಾಗಿದೆ. 2,859 ಅಡಿ ನೀರಿನ ಸಂಗ್ರಹ ಸಾಮಥ್ರ್ಯದ ಹಾರಂಗಿ ಜಲಾಶಯದಲ್ಲಿ ಪ್ರಸ್ತುತ 2,826 ಅಡಿ ನೀರಿನ ಸಂಗ್ರಹವಿದೆ. ಹಾರಂಗಿ ಜಲಾಶಯದ ನೀರಿನ ಮೂಲಗಳ ವ್ಯಾಪ್ತಿಯಲ್ಲಿ ಉತ್ತಮ ಮಳೆ ಸುರಿಯುತ್ತಿರುವ ಕಾರಣ ಜಲಾಶಯಕ್ಕೆ 885 ಕ್ಯೂಸೆಕ್ ನೀರಿನ ಒಳಹರಿವು ದಾಖಲಾಗಿದೆ.