ಕಬ್ಬಿಗೆ ಎಫ್‍ಆರ್‍ಪಿ ದರ ಏರಿಕೆಗೆ ಆಗ್ರಹಿಸಿ ರೈತರಿಂದ ಹೆದ್ದಾರಿ ತಡೆ

ಚಾಮರಾಜನಗರ, ಸೆ.6- ಕಬ್ಬಿಗೆ ಎಫ್ ಆರ್‍ಪಿ ದರವನ್ನು ಏರಿಕೆ ಮಾಡುವಂತೆ ಆಗ್ರಹಿಸಿ ರಾಜ್ಯ ರೈತ ಸಂಘದ ಜಿಲ್ಲಾ ಘಟ ಕದ ಪದಾಧಿಕಾರಿಗಳು ನಗರದ ಹೊರ ವಲಯದಲ್ಲಿ ಸೋಮವಾರ ರಾಷ್ಟ್ರೀಯ ಹೆದ್ದಾರಿ 209 ತಡೆದು ಪ್ರತಿಭಟನೆ ನಡೆಸಿದರು.

ನಗರದ ಹೊರವಲಯದ ರೇಷ್ಮೆ ಮಾರು ಕಟ್ಟೆ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ಕೇಂದ್ರ ಸರ್ಕಾರವು ಕಬ್ಬಿನ ಎಫ್‍ಆರ್‍ಪಿ ದರವನ್ನು ಕೆಜಿಗೆ 5 ರೂ. ಮಾತ್ರ ಏರಿಕೆ ಮಾಡಿದೆ. ಆದರೆ, ಕ್ವಿಂಟಾಲ್‍ಗೆ 290 ರೂ.ಗಳನ್ನು ಏರಿಕೆ ಮಾಡಿರುವುದಾಗಿ ಹೇಳುತ್ತಿದೆ. ಕಳೆದ ವರ್ಷ 285 ರೂ. ಇತ್ತು. ಈ ವರ್ಷ 5 ರೂ. ಮಾತ್ರ ಹೆಚ್ಚಾಗಿದೆ ಎಂದರು.

ಕಬ್ಬು ಬೆಳೆಯುವ ರೈತರಿಗೆ ಎಷ್ಟು ಖರ್ಚಾಗುತ್ತಿದೆ ಎಂಬುದನ್ನು ಯೋಚನೆ ಮಾಡುತ್ತಿಲ್ಲ. ಅಲ್ಲದೇ ಈ ದರವನ್ನು ನಿಗದಿ ಮಾಡುವಾಗ ರೈತರನ್ನು ಆಹ್ವಾನಿ ಸದೆ ಕಾರ್ಖಾನೆಯ ಮಾಲೀಕರಿಂದ ಲಂಚ ಪಡೆದು ದರ ನಿಗದಿ ಮಾಡುವ ಮೂಲಕ ರೈತರಿಗೆ ಮೋಸ ಮಾಡಲಾಗಿದೆ. ಸರ್ಕಾ ರಕ್ಕೆ ರೈತರ ಬಗ್ಗೆ ಕಾಳಜಿ ಇದ್ದರೆ ರೈತರೊಂ ದಿಗೆ ಚರ್ಚಿಸಿ ಬೆಲೆ ನಿಗದಿಪಡಿಸಬೇಕು. ಅಲ್ಲದೇ ಕ್ವಿಂಟಾಲ್‍ಗೆ 350 ರೂ. ಏರಿಕೆ ಮಾಡಬೇಕು ಎಂದು ತಿಳಿಸಿದರು.
ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ತೊಂದರೆ ಅನುಭವಿಸು ವಂತಾಗಿದೆ. ಜಿಲ್ಲೆಯ ಶ್ರೀಮಲೆ ಮಹದೇಶ್ವರ ಬೆಟ್ಟದ ಪೋಡುಗಳಲ್ಲಿ ಮೂಲ ಸೌಕರ್ಯ ಗಳ ಕೊರತೆಯಿಂದಾಗಿ ಅಲ್ಲಿನ ಜನರಿಗೆ ತೊಂದರೆಯಾಗಿದೆ. ಪ್ರಮುಖವಾಗಿ ರಸ್ತೆ, ಕುಡಿಯುವ ನೀರು, ವಿದ್ಯುತ್ ಸಮಸ್ಯೆ ಹೆಚ್ಚಾಗಿದೆ. ಜಿಲ್ಲೆಯ ಸಮಸ್ಯೆಗಳ ಬಗ್ಗೆ ಸಮಗ್ರವಾಗಿ ಚರ್ಚಿಸಲು ಜಿಲ್ಲಾ ಉಸ್ತು ವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಸಭೆ ನಡೆಸಬೇಕು. ಇಲ್ಲದಿದ್ದರೆ ಉಸ್ತುವಾರಿ ಸಚಿವರು ಜಿಲ್ಲೆಗೆ ಬಂದಾಗ ಕಪ್ಪು ಬಟ್ಟೆ ಪ್ರದರ್ಶಿಸಲಾಗುವುದು ಎಂದು ಎಚ್ಚರಿಸಿದರು.

ಸ್ಥಳಕ್ಕೆ ಅಧಿಕಾರಿಗಳು ಬರುವಂತೆ ಪಟ್ಟು: ರಸ್ತೆ ತಡೆದು ಪ್ರತಿಭಟನೆ ನಡೆಸಿದ ರೈತ ಸಂಘದ ಪದಾಧಿಕಾರಿಗಳು ಸ್ಥಳಕ್ಕೆ ಅಧಿ ಕಾರಿಗಳು ಬಂದು ಜಿಲ್ಲೆಯ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಭರವಸೆ ನೀಡಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿ ದರು. ಬಳಿಕ ಪೊಲೀಸರು ಸ್ಥಳಕ್ಕೆ ಹೆಚ್ಚು ವರಿ ಜಿಲ್ಲಾಧಿಕಾರಿಗಳು ಬರಲಿದ್ದು, ರಸ್ತೆ ತಡೆ ಕೈ ಬಿಡುವಂತೆ ಮನವಿ ಮಾಡಿದರು. ಬಳಿಕ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿ ಪ್ರತಿಭಟನೆ ಮುಂದುವರಿಸಿದರು.

ಬಳಿಕ, ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿ ದೇವಿ ಭೇಟಿ ನೀಡಿ, ರೈತರ ಅಹವಾಲು ಆಲಿಸಿ, ಮನವಿ ಸ್ವೀಕರಿಸಿದರು. ನಿಮ್ಮ ಬೇಡಿಕೆಯನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಮಾಡ್ರಹಳ್ಳಿ ಮಹದೇವಪ್ಪ, ಮೇಲಾಜಿಪುರ ಕುಮಾರ್, ಮಹೇಶ್, ಮಾದಪ್ಪ, ಕರಿಯಪ್ಪ, ವಿಜಿ, ಪೃಥ್ವಿ, ಶಿವಮೂರ್ತಿ, ರಘು, ಪಾಪು, ಮಹೇಶ್ ಇತರರು ಭಾಗವಹಿಸಿದ್ದರು.