ಲೋಕಸಭೆಯಲ್ಲಿ ಐತಿಹಾಸಿಕ ತ್ರಿವಳಿ ತಲಾಖ್ ನಿಷೇಧ ಮಸೂದೆ ಅಂಗೀಕಾರ

ನವದೆಹಲಿ: ಮುಸ್ಲಿಂ ಮಹಿಳೆಯರ ವಿವಾಹ ಹಕ್ಕು ರಕ್ಷಣೆಗೆ ಒತ್ತು ನೀಡುವ ಐತಿ ಹಾಸಿಕ ತ್ರಿವಳಿ ತಲಾಖ್ ಮಸೂದೆ ಗುರುವಾರ ಲೋಕಸಭೆಯಲ್ಲಿ ಅಂಗೀಕಾರವಾಗಿದೆ.

ಇಂದು ಬೆಳಿಗ್ಗೆ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ತ್ರಿವಳಿ ತಲಾಖ್ ಮಸೂದೆ ಯನ್ನು ಮಂಡಿಸಿದರು. ಸುದೀರ್ಘ ಚರ್ಚೆಯ ನಂತರ ವಿಧೇಯಕವನ್ನು ಮತಕ್ಕೆ ಹಾಕಲಾಯಿತು. ವಿಧೇಯಕದ ಪರವಾಗಿ 245 ಮತ ಹಾಗೂ ವಿಧೇಯಕದ ವಿರುದ್ಧವಾಗಿ ಕೇವಲ 11 ಮತ ಚಲಾವಣೆಯಾದವು. ತ್ರಿವಳಿ ತಲಾಖ್ ಮಸೂದೆ ಮಂಡಿಸಿ ಮಾತನಾಡಿದ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು, ತ್ರಿವಳಿ ತಲಾಖ್ ನೀಡುವ, ಮಹಿಳೆ ಯರ ಮೇಲೆ ಅಪರಾಧ ಎಸಗುವ ಮುಸ್ಲಿಮ್ ಪುರುಷನನ್ನು ದಂಡಿಸಬೇಕು. ಇದಕ್ಕೆ ಕಾನೂನಿನಲ್ಲಿ ಅವಕಾಶ ನೀಡಬೇಕು. ಹಾಗೆಯೇ ಮುಸ್ಲಿಂ ಸಮುದಾಯದ ಮಹಿಳಾ ಸಬಲೀಕರಣ ಆಗಬೇಕಿದೆ. ಈ ಕಾರಣದಿಂದಾಗಿ ನಾವು ಈ ಮಸೂದೆ ಮಾಡಲು ಹೊರಟಿದ್ದೇವೆ ಹೊರತು, ಇದರಲ್ಲಿ ಯಾವುದೇ ರಾಜಕೀಯ ಉದ್ದೇಶ ಇಲ್ಲ ಎಂದರು.

ಖರ್ಗೆ ಆಕ್ಷೇಪ: ತ್ರಿವಳಿ ತಲಾಖ್ ಮಸೂದೆಯಲ್ಲಿ ಕೆಲವು ಅಂಶಗಳು ಅಸಾಂವಿಧಾನಿಕವಾಗಿವೆ. ಈ ಕರಡು ಕಾನೂನನ್ನು ಇನ್ನಷ್ಟು ಆಳವಾಗಿ ಅವಲೋಕಿಸಬೇಕಾದ ಅಗತ್ಯವಿದೆ. ಹೀಗಾಗಿ ಮುಸ್ಲಿಂ ಮಹಿಳೆಯರ ವೈವಾಹಿಕ ಹಕ್ಕುಗಳ ರಕ್ಷಣೆ ಮಸೂದೆ (ತ್ರಿವಳಿ ತಲಾಖ್ ಮಸೂದೆ) ಯನ್ನು ಎರಡೂ ಸದನಗಳ ಜಂಟಿ ಆಯ್ಕೆ ಸಮಿತಿಗೆ ಉಲ್ಲೇಖಿಸಬೇಕು. ಇದರಲ್ಲಿ ಒಳಗೊಂಡಿರುವ ಅಸಾಂವಿ ಧಾನಿಕ ಅಂಶಗಳನ್ನು ಮತ್ತೊಮ್ಮೆ ಅವಲೋಕಿಸಬೇಕೆಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದರು. ಎಐಎಡಿಎಂಕೆ ನಾಯಕ ಪಿ. ವೇಣು ಗೋಪಾಲ್, ಟಿಎಂಸಿ ಸದಸ್ಯ ಸುದೀಪ್ ಬಂದೋಪಾ ಧ್ಯಾಯ, ಎಐಎಂಐಎಂನ ಅಸಾದುದ್ದೀನ್ ಓವೈಸಿ ಮತ್ತು ಎನ್‍ಸಿಪಿಯ ಸುಪ್ರಿಯಾ ಸುಳೆ ಅವರು ಕೂಡ ಇದೇ ಆಗ್ರಹವನ್ನು ಮುಂದಿಟ್ಟರು.

ಫತ್ವಾ ಅಂಗಡಿ: ಇತ್ತೀಚೆಗೆ ಕೆಲವು ಜನ ಫತ್ವಾ ಅಂಗಡಿ ಗಳನ್ನೇ ತೆರೆದಿದ್ದಾರೆ. ಆದರೆ ದೇಶ ಸಂವಿಧಾನದ ಆಧಾರದ ಮೇಲೆ ನಡೆಯುತ್ತಿದೆ. ಶರಿಯಾ ಕಾನೂನಿನಂತೆ ನಡೆಯು ತ್ತಿಲ್ಲ ಎಂದು ಕೇಂದ್ರ ಅಲ್ಪ ಸಂಖ್ಯಾತ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಅವರು ವಾದಿಸಿದರು. ತ್ರಿವಳಿ ತಲಾಖ್ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ನಖ್ವಿ, ಮುಸ್ಲಿಂ ಮಹಿಳೆಯರ ಹಕ್ಕು ರಕ್ಷಣೆಗೆ ಈ ಸರ್ಕಾರ ಬದ್ಧವಾಗಿದೆ. ಶರಿಯಾ ಕಾನೂನಿನಲ್ಲೂ ತ್ರಿವಳಿ ತಲಾಖ್‍ಗೆ ಅವಕಾಶ ಇಲ್ಲ. ಹೀಗಾಗಿ ತ್ರಿವಳಿ ತಲಾಖ್ ನಿಷೇಧಿಸಲಾಗುತ್ತಿದೆ. ಈ ಸಂಬಂಧ ನಾನು ಪ್ರಧಾನಿ ನರೇಂದ್ರ ಮೋದಿ ಮತ್ತು ರವಿಶಂಕರ್ ಪ್ರಸಾದ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಸುಪ್ರೀಂ ಕೋರ್ಟ್ ತ್ರಿವಳಿ ತಲಾಖ್ ಅನ್ನು ತಾತ್ಕಾಲಿಕವಾಗಿ ನಿಷೇಧಿಸಿದ್ದು, ಅದನ್ನು ಕಾನೂನಾತ್ಮಕವಾಗಿ ಸಂಪೂರ್ಣ ತೆಗೆದು ಹಾಕಲು ಮುಂದಾಗಿರುವ ಕೇಂದ್ರ ಸರ್ಕಾರ ತ್ರಿವಳಿ ತಲಾಖ್ ತಿದ್ದುಪಡಿ ಮಸೂದೆಯನ್ನು ಕಳೆದ ಡಿಸೆಂಬರ್ ನಲ್ಲಿ ಲೋಕಸಭೆಯಲ್ಲಿ ಅಂಗೀಕರಿಸಿತ್ತು. ಆದರೆ, ರಾಜ್ಯಸಭೆಯಲ್ಲಿ ಅನುಮೋದನೆ ಸಿಗದ ಕಾರಣ ಕಾಯ್ದೆಯಾಗಿ ರೂಪ ಗೊಂಡಿರಲಿಲ್ಲ. ಆದ್ದರಿಂದ, ಸರ್ಕಾರ ಸುಗ್ರೀವಾಜ್ಞೆ ಮೂಲಕ ಕಾಯ್ದೆ ಜಾರಿಗೆ ತಂದಿತ್ತು. ಸುಗ್ರಿವಾಜ್ಞೆಗೂ ಎರಡೂ ಸದನಗಳ ಒಪ್ಪಿಗೆ ಬೇಕಾದ ಕಾರಣ ಇಂದು ಮತ್ತೆ ಲೋಕ ಸಭೆಯಲ್ಲಿ ಮಂಡಿಸಿ ಅಂಗೀಕರಿಸಲಾಗಿದೆ.