ಮೈಸೂರು, ಮೇ 7(ಆರ್‍ಕೆಬಿ)- ಕೋವಿಡ್-19 ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿಗಳ ಪರಿಹಾರ ನಿಧಿ ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಎಷ್ಟು ಹಣ ಸಂಗ್ರಹವಾಗಿದೆ? ಎಷ್ಟು ಹಣ ಬಳಸಲಾಗಿದೆ ಎಂಬ ಬಗ್ಗೆ ಕೇಂದ್ರ ಮತ್ತು ರಾಜ್ಯದಲ್ಲಿನ ಬಿಜೆಪಿ ಸರ್ಕಾರಗಳು ಬಹಿರಂಗಪಡಿಸಬೇಕು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಒತ್ತಾಯಿಸಿದ್ದಾರೆ.
ಮೈಸೂರಿನಲ್ಲಿ ಇಂದಿರಾಗಾಂಧಿ ಕಾಂಗ್ರೆಸ್ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆ ಸಿದ ಅವರು, ಪಿಎಂ ಪರಿಹಾರ ನಿಧಿ ಬದಲು `ಕೋವಿಡ್-19 ಪಿಎಂ ಕೇರ್ ಫಂಡ್’ ತೆರೆದಿರುವುದು ಸರಿಯಲ್ಲ. ಅಷ್ಟೂ ಹಣ ವನ್ನು ಪಿಎಂ ಪರಿಹಾರ ನಿಧಿಗೆ ವರ್ಗಾ ಯಿಸಬೇಕು ಎಂದು ಆಗ್ರಹಿಸಿದರು.
ದೇಣಿಗೆ ಬಂದ ಹಣದ ಬಗ್ಗೆ ಆರ್‍ಟಿ ಐನಡಿ ಮಾಹಿತಿ ಕೇಳಿದರೂ ಅಧಿಕಾರಿ ಗಳು ನೀಡುತ್ತಿಲ್ಲ. 60 ಲಕ್ಷ ಕೇಂದ್ರ ಸರ್ಕಾರಿ ನೌಕರರ 1 ದಿನದ ವೇತನ ಪಿಎಂ ಕೇರ್ಸ್ ನಿಧಿಗೆ ಪಾವತಿಸಿದ್ದು, ಎನ್‍ಆರ್‍ಐಗಳು, ಅಜೀಂ ಪ್ರೇಮ್‍ಜಿ, ಅಕ್ಷಯ್‍ಕುಮಾರ್ ಸೇರಿ ದಂತೆ ಅನೇಕ ಉದ್ಯಮಿಗಳು, ಚಿತ್ರನಟರು ದೇಣಿಗೆ ನೀಡಿದ್ದಾರೆ. 1 ಲಕ್ಷ ಕೋಟಿಗೂ ಮೀರಿ ಹಣ ನಿಧಿಗೆ ಬಂದಿದೆ ಎಂಬ ಅಂದಾಜಿದೆ ಎಂದರು. ಕೆಪಿಸಿಸಿ ವಕ್ತಾರ ರಾದ ಮಂಜುಳಾ ಮಾನಸ, ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಬಿ.ಜೆ.ವಿಜಯಕುಮಾರ್, ನಗರ ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ ಇನ್ನಿತರರಿದ್ದರು.