ವಿಶ್ವಕರ್ಮ ಸಮುದಾಯದಿಂದ ಸಮಾಜಕ್ಕೆ ಅನನ್ಯ ಕೊಡುಗೆ

ಮಡಿಕೇರಿ: ವಿಶ್ವಕರ್ಮ ಸಮಾಜದ ಬಂಧುಗಳು ಮರದ ಕೆತ್ತನೆ, ಚಿನ್ನದ ಕೆಲಸ ಹೀಗೆ ನಾನಾ ವೃತ್ತಿಪರ ಕ್ಷೇತ್ರದಲ್ಲಿ ತೊಡ ಗಿಸಿಕೊಂಡು, ಸಮಾಜಕ್ಕೆ ತಮ್ಮದೇ ಆದ ಅನನ್ಯವಾದ ಕೊಡುಗೆ ನೀಡಿದ್ದಾರೆ ಎಂದು ನಗರಸಭೆ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ ಶ್ಲಾಘಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ನಗರದ ಮೈತ್ರಿ ಸಭಾಂಗಣ ದಲ್ಲಿ ಸೋಮವಾರ ನಡೆದ ‘ವಿಶ್ವ ಕರ್ಮ ಜಯಂತ್ಯುತ್ಸವ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಶ್ವಕರ್ಮ ಎಂದರೆ ವಿಶ್ವದ ಸೃಷ್ಟಿಕರ್ತ, ಆದ್ದರಿಂದ ಇಡೀ ಜಗತ್ತೇ ವಿಶ್ವಕರ್ಮದಿಂದ ಕೂಡಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಮಾತನಾಡಿ, ಅಜಂತಾ, ಎಲ್ಲೋರ ದೇವಾ ಲಯಗಳು, ಬೇಲೂರು ಹಳೇಬೀಡು ಶಿಲ್ಪ ಕಲೆಗಳು ವಿಶ್ವ ಪ್ರಸಿದ್ಧಿ ಪಡೆದಿವೆ. ಇದಕ್ಕೆ ಅಲ್ಲಿನ ಕೆತ್ತನೆ ಹಾಗೂ ಶಿಲ್ಪ ಕಲೆಗಳೇ ಸಾಕ್ಷಿ. ಆ ನಿಟ್ಟಿನಲ್ಲಿ ವಿಶ್ವಕರ್ಮರ ಕ್ರಿಯಾಶೀಲ ತೆಯನ್ನು ಕಾಣಬಹುದಾಗಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್ ಮಾತನಾಡಿ, ಕರ್ಮ ಎಂದರೆ ವೃತ್ತಿ ಯಾಗಿದೆ. ಅಮರ ಶಿಲ್ಪಿ ಜಕಣಾಚಾರಿ ಸೇರಿದಂತೆ ಹಲವರು ಶಿಲ್ಪ ಕಲೆಯಲ್ಲಿ ತಮ್ಮದೇ ಛಾಪು ಮೂಡಿಸಿ ವಿಶ್ವ ಪ್ರಸಿದ್ಧಿ ಪಡೆದಿದ್ದಾರೆ ಎಂದು ಹೇಳಿದರು.

ಜಗತ್ತಿನ ಮೂಲ ಸೃಷ್ಠಿ ಕರ್ತ ವಿಶ್ವಕರ್ಮ. 20 ಸಾವಿರ ವರ್ಷಗಳ ಹಿಂದೆ ಗಾಯತ್ರಿ ಮಂತ್ರವನ್ನು ಬರೆದ ಮಹಾನ್ ಚೇತನ ವಿಶ್ವಕರ್ಮ ಎಂದು ಅವರು ಹೇಳಿದರು.

ಸರಸ್ವತಿ ಡಿಇಡಿ ಕಾಲೇಜಿನ ಪ್ರಾಂಶು ಪಾಲ ಕುಮಾರ್ ಮಾತನಾಡಿ, ಸನಾತನ ಧರ್ಮಗಳಿಗೆ ಸೃಷ್ಟಿ ನೀಡಿದ ಧರ್ಮವೇ ವಿಶ್ವಕರ್ಮ ಎಂದರೆ ತಪ್ಪಾಗಲಾರದು. ಬಡಿಗ, ಕಮ್ಮಾರ, ಶಿಲ್ಪಕಲೆ ಹಾಗೂ ಸ್ವರ್ಣ ಕಲೆಗಳನ್ನು ಮಾಡುವುದು ಸೇರಿದಂತೆ ಪಂಚ ಕಸುಬುಗಳನ್ನು ನಿರ್ವಹಿಸುವವರೇ ವಿಶ್ವಕರ್ಮರು ಎಂದರು. ಹಗಲಿನಲ್ಲಿ ಸೂರ್ಯನಾಗಿ ರಾತ್ರಿನಲ್ಲಿ ಚಂದ್ರನಾಗಿ ಪ್ರಕೃತಿಯ ಸ್ವರೂಪವಾಗಿ ಚೈತನ್ಯವನ್ನು ತುಂಬಿಕೊಂಡಿರುವವನೇ ವಿಶ್ವಕರ್ಮನೆಂದು ಅವರು ಶ್ಲಾಘಿಸಿದರು.

ದೇಶದ ಇತಿಹಾಸದ ಪುಟಗಳಲ್ಲಿ ದೊಡ್ಡ ದೊಡ್ಡ ಶಿಲ್ಪಗಳನ್ನು ಕೆತ್ತಿರುವವರು ವಿಶ್ವಕರ್ಮನ ಅನುಯಾಯಿಗಳು ಎಂಬುದು ಹೆಮ್ಮೆಯ ವಿಚಾರ. ವಿಶ್ವಕರ್ಮ ಎಂಬುದು ವಿರಾಟ್ ಪರ್ವ ಇದ್ದಂತೆ, ಎಲ್ಲಾ ಕೆಲಸ ಕಾರ್ಯಗಳಿಗೆ ಶಕ್ತಿ ನೀಡುವವನು ವಿಶ್ವಕರ್ಮ ಎಂದು ಬಣ್ಣಿಸಿದರು.

ವಿಶ್ವಕರ್ಮ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಜೆ. ದೇವದಾಸ್ ಮಾತನಾಡಿ ದರು. ಜಿಪಂ ಉಪ ಕಾರ್ಯದರ್ಶಿ ಗುರೂರು ಭೀಮಸೇನ್, ಮೈತ್ರಿ ಪರಿಹಾರ ಕೇಂದ್ರ ನೋಡಲ್ ಅಧಿಕಾರಿ ಫಣೀಂದ್ರ ಇತರರು ಇದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಟಿ.ದರ್ಶನ್ ಸ್ವಾಗತಿಸಿದರು. ಮಣಜೂರು ಮಂಜುನಾಥ್ ನಿರೂಪಿಸಿ, ವಂದಿಸಿದರು.