ಮೈಸೂರು, ಮೇ 20(ಆರ್‍ಕೆ)- 2020ರ ಜನವರಿ 1ರಿಂದ ಮೇ 18ರವರೆಗೆ ಮೈಸೂರು ನಗರದಲ್ಲಿ 9 ಕೊಲೆ, 9 ಸುಲಿಗೆ, 156 ಕಳವು ಹಾಗೂ 15 ಮಹಿಳೆ ಯರ ಸರ ಅಪಹರಣ ಸೇರಿದಂತೆ ವಿವಿಧ ಸ್ವರೂಪದ ಒಟ್ಟು 1,042 ಅಪರಾಧ ಪ್ರಕರಣಗಳು ಸಂಭವಿಸಿವೆ. ಕೋವಿಡ್-19 ಲಾಕ್‍ಡೌನ್ ನಿರ್ಬಂಧವಿದ್ದಾಗ್ಯೂ ಮಾರ್ಚ್ ಮಾಹೆಯಲ್ಲಿ 2, ಏಪ್ರಿಲ್‍ನಲ್ಲಿ 1 ಹಾಗೂ ಮೇ ತಿಂಗ ಳಲ್ಲಿ 3 ಸೇರಿ ಜನವರಿಯಿಂದ ಮೇ 18ರವರೆಗೆ ಒಟು 9 ಕೊಲೆ ಪ್ರಕರಣ ದಾಖಲಾಗಿವೆ. ಈ ಅವಧಿಯಲ್ಲಿ 24 ಕೊಲೆ ಯತ್ನ, 2 ಡಕಾಯಿತಿ, 9 ಸುಲಿಗೆ, 15 ಸರ ಅಪಹರಣ, 156 ಮನೆ ಕಳವು ಪ್ರಕರಣ ಸಂಭವಿಸಿವೆ. 51 ವಂಚನೆ, 22 ಅಪಹರಣ, 1 ಅತ್ಯಾಚಾರ, 15 ಪೋಕ್ಸೊ, 8 ಎಸ್ಸಿ-ಎಸ್ಟಿ ಕಾಯ್ದೆಯಡಿ, 41 ಜೂಜು, 9 ಅಬಕಾರಿ ಸೇರಿದಂತೆ ಒಟ್ಟು 1042 ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ಸಿಸಿಆರ್‍ಬಿ ಘಟಕದ ಅಂಕಿ-ಅಂಶಗಳಿಂದ ತಿಳಿದುಬಂದಿದೆ. ಮಾರ್ಚ್ ಮಾಹೆಯಿಂದ ಈವರೆಗೆ 6 ಹತ್ಯೆ, 11 ಹತ್ಯೆ ಯತ್ನ, 1 ಡಕಾಯಿತಿ, 7 ಚಿನ್ನದ ಸರ ಅಪಹರಣ, 13 ಮನೆ ಕಳವು, 13 ವಂಚನೆ, 7 ಅಪಹರಣ, 2 ಪೋಕ್ಸೊ, 7 ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗಿವೆ. ನಿರ್ಬಂಧದಿಂದ ಜನರು ಮನೆಯಲ್ಲೇ ಇದ್ದಾಗ್ಯೂ ಅಪಹರಣಗಳು ಸಂಭವಿಸಿರುವುದು ವಿಶೇಷ.