ಮೈತ್ರಿ ಸರ್ಕಾರದಲ್ಲಿ ಕುರುಬ ಸಮುದಾಯಕ್ಕೆ ಸಚಿವ ಸ್ಥಾನ ನೀಡದೇ ಅನ್ಯಾಯ ಆರೋಪ

ಮೈಸೂರು: ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್‍ನ ಕುರುಬ ಸಮುದಾಯದ ಶಾಸಕರಿಗೆ ಸಚಿವ ಸ್ಥಾನಮಾನ ನೀಡದೇ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿ ಹಾಲುಮತ ಮಹಾಸಭಾದ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಮೈಸೂರಿನ ಗಾಂಧಿಚೌಕದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, 2018ರ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಕಾಂಗ್ರೆಸ್‍ನಲ್ಲಿರುವ ಕಾರಣಕ್ಕೆ ಶೇ.90ರಷ್ಟು ಕುರುಬ ಸಮುದಾಯದವರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ. ಆದರೆ ಈಗ ಕಾಂಗ್ರೆಸ್‍ನಲ್ಲಿ ಜನಾಂಗದ ಶಾಸಕರಿಗೆ ಸಚಿವ ಸ್ಥಾನ ನೀಡದೇ ದ್ರೋಹ ಮಾಡಲಾಗಿದೆ ಎಂದು ಆರೋಪಿಸಿದರು.

ಕಳೆದ ಕಾಂಗ್ರೆಸ್ ಸರ್ಕಾರದಲ್ಲಿ ಐದು ವರ್ಷಗಳ ಪೂರ್ಣಾವಧಿಗೆ ಕುರುಬ ಸಮಾಜದ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿದ್ದರು. ಈಗಿರುವಾಗ ಈಗ ಸಚಿವ ಸ್ಥಾನ ಏಕೆ ಬೇಕೆಂದು ಅಪಮಾನಿಸಿದ್ದೂ ಆಗಿದೆ. ಕುರುಬ ಸಮುದಾಯದವರು ಮುಗ್ಧರಿರಬಹುದು. ಆದರೆ ಈ ರೀತಿಯ ಅನ್ಯಾಯಗಳನ್ನು ಸಹಿಸಿಕೊಳ್ಳುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಕೂಡಲೇ ಕಾಂಗ್ರೆಸ್‍ನ ನಾಲ್ವರು ಶಾಸಕರಿಗೆ ಸಚಿವ ಸ್ಥಾನ ನೀಡಲು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಕಾಂಗ್ರೆಸ್ ಪಕ್ಷವನ್ನು ಸಮುದಾಯ ಬಹಿಷ್ಕರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಹಾಲುಮತ ಮಹಾಸಭಾದ ಜಿಲ್ಲಾಧ್ಯಕ್ಷ ವಿಜಯಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ನಾಗೇಶ್, ಜಿಲ್ಲಾ ಸಂಚಾಲಕ ಗಂಧನಹಳ್ಳಿ ಹೇಮಂತ್‍ಕುಮಾರ್, ವಿವಿಧ ತಾಲೂಕು ಅಧ್ಯಕ್ಷರಾದ ಮಹೇಶ್, ಕುಮಾರಸ್ವಾಮಿ, ಕುಮಾರ್, ಸ್ವಾಮಿಗೌಡ, ಧನರಾಜ್, ಕಿರಣ್, ನಂದೀಶ್, ರಾಘವೇಂದ್ರ, ಉಮೇಶ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.