ಪ್ರಸಾದಕ್ಕೆ ವಿಷ ಹಾಕುವ ಸಂಚು ರೂಪಿಸಿದ್ದೆ ಇಮ್ಮಡಿ ಮಹದೇವಸ್ವಾಮಿ ತೋಟದ ಮನೆಯಲ್ಲಿ

ಚಾಮರಾಜನಗರ: ಕಿಚ್‍ಗುತ್ ಮಾರಮ್ಮ ದೇವಸ್ಥಾನದಲ್ಲಿ ಭಕ್ತರ ಪ್ರಸಾದಕ್ಕೆ ವಿಷ ಮಿಶ್ರಣ ಮಾಡುವ ಸಂಚು ನಡೆಸಿದ್ದು, ಈಗ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸಾಲೂರು ಮಠದ ಕಿರಿಯ ಸ್ವಾಮೀಜಿ ಇಮ್ಮಡಿ ಮಹದೇವ ಸ್ವಾಮಿ ತೋಟದ ಮನೆಯಲ್ಲಿ ಎಂಬ ಅಂಶ ತನಿಖೆಯಿಂದ ಹೊರ ಬಿದ್ದಿದೆ. ಹನೂರು ತಾಲೂಕಿನ ವಡಕೆಹಳ್ಳ ಸಮೀಪದ ಎಲಚಕೆರೆಯಲ್ಲಿ ಇಮ್ಮಡಿ ಮಹದೇವ ಸ್ವಾಮಿಗೆ ಸೇರಿದ 50 ಎಕರೆ ಜಮೀನಿದೆ. ಈ ಜಮೀನಿನ ಮಧ್ಯ ಭಾಗದಲ್ಲಿ ಹಳೆಯದಾದ ಮನೆಯೊಂದಿದೆ.

ಹೊರಗಿನಿಂದ ನೋಡಲು ಇದು ಹಳೆಯ ಹಾಗೂ ದುಸ್ಥಿತಿಯಲ್ಲಿರುವಂತೆ ಕಂಡು ಬಂದರೂ, ಒಳಗೆ ಎಲ್ಲಾ ಅತ್ಯಾಧುನಿಕ ಸೌಕರ್ಯಗಳಿವೆ. ತನಿಖಾಧಿಕಾರಿಗಳು ಮಹಜರು ನಡೆಸಿರುವ ಸಂದರ್ಭದಲ್ಲಿ ಈ ಮನೆಯಲ್ಲಿ ಎಸಿ ಕೊಠಡಿ ಇರುವುದು ಕಂಡು ಬಂದಿದೆ. ಜೊತೆಗೆ ಆ ಕೊಠಡಿಗೆ ಯಾರೊಬ್ಬರಿಗೂ ಪ್ರವೇಶಕ್ಕೆ ಅವಕಾಶವಿಲ್ಲ ದಂತೆ ಅತ್ಯಾಧುನಿಕ ಬಾಗಿಲು ವ್ಯವಸ್ಥೆಯನ್ನು ಮಾಡಿದ್ದಾನಂತೆ. ಈ ಹೈಟೆಕ್ ವ್ಯವಸ್ಥೆಯನ್ನು ಕಂಡು ತನಿಖಾಧಿಕಾರಿಗಳೇ ದಂಗಾಗಿದ್ದಾರೆ. ಈ ಮನೆಯಲ್ಲೇ ಕೂತು ವಿಷ ಪ್ರಸಾದ ಪ್ರಕರಣಕ್ಕೆ ಸಂಚು ರೂಪಿಸಲಾಗಿದೆ. ತಮ್ಮ ಪ್ರಯತ್ನ ಫಲ ನೀಡಲಿ ಎಂಬ ಉದ್ದೇಶ ದಿಂದ ಇಮ್ಮಡಿ ಮಹದೇವಸ್ವಾಮಿ ನೇತೃತ್ವದಲ್ಲಿ ಇದೇ ಮನೆಯಲ್ಲಿ ವಿಶೇಷ ಪೂಜೆ ಹಾಗೂ ಹೋಮ ಕೂಡ ನಡೆದಿದೆ. ದೇವಾಲಯದಲ್ಲಿ ಭಕ್ತರ ಪ್ರಸಾದಕ್ಕೆ ವಿಷ ಮಿಶ್ರಣ ಮಾಡುವ ಸಲುವಾಗಿ ಡಿ.7ರಂದು ಕೃಷಿ ಅಧಿಕಾರಿಯಿಂದ ಮೊನೊಕ್ರೋಟೋಪಾಸ್ ಕ್ರಿಮಿನಾಶಕವನ್ನು ತರಿಸಿಕೊಂಡ ಅಂಬಿಕಾ, ಡಿ.9ರಂದು ಇಮ್ಮಡಿ ಮಹದೇವಸ್ವಾಮಿ ಯೊಂದಿಗೆ ತಮ್ಮ ಪ್ರಯತ್ನ ಫಲ ನೀಡಲಿ ಎಂಬ ಉದ್ದೇಶದಿಂದ ಹೋಮದಲ್ಲಿ ತಾನೂ ಪಾಲ್ಗೊಂಡಿದ್ದಾಳೆ. ಇದರ ಫಲ ವಿಷ ಪ್ರಸಾದ ಸೇವನೆ ಮಾಡಿ ಈಗಾಗಲೇ 17 ಮಂದಿ ಸಾವಿಗೀಡಾಗಿದ್ದು, ಇನ್ನೂ ಹಲವರು ಗಂಭೀರ ಸ್ಥಿತಿಯಲ್ಲಿದ್ದಾರೆ.