ಮಾನಸಿಕ ಖಿನ್ನತೆಯಲ್ಲಿ ಭಾರತಕ್ಕೆ  ಮೊದಲ ಸ್ಥಾನ: ಶಾಸಕ ರಾಮದಾಸ್ ವಿಷಾದ

ಮೈಸೂರು:  ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವವರ ಸಂಖ್ಯೆಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ ಎಂದು ಶಾಸಕ ಎಸ್.ಎ.ರಾಮದಾಸ್ ವಿಷಾದಿಸಿದರು.

ನಗರದ ಬೋಗಾದಿ ವರ್ತುಲ ರಸ್ತೆಯಲ್ಲಿರುವ ಜಿಎಲ್‍ಎನ್ ಕಲ್ಯಾಣ ಮಂಟಪದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿ ಮೈಸೂರು ಜಯಚಾಮರಾಜ ವಲಯದ ವತಿಯಿಂದ ಇಂದಿನಿಂದ ಆ.5ರವರೆಗೆ ಆಯೋಜಿಸಿರುವ ‘ಯೋಗ ಜೀವನ ದರ್ಶನ 2018’ರ ಪ್ರಾಥಮಿಕ ಯೋಗ ಪ್ರಶಿಕ್ಷಣ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ನೆಮ್ಮದಿ, ಆರೋಗ್ಯಕರ ಜೀವನ ನಡೆಸಲು ಯೋಗ ಅವಶ್ಯಕ ಎಂದರು.

ನಾನು ಶಾಲೆಗಳಿಗೆ ಭೇಟಿ ನೀಡಿದ ವೇಳೆ ಶಾಲೆ ಬಿಟ್ಟ ಮಕ್ಕಳ ಬಗ್ಗೆ ವಿಚಾರಿಸಿದಾಗ ಆಶ್ಚರ್ಯವಾಯಿತು. ಶಾಲೆ ಬಿಟ್ಟ ಕೆಲವು ಮಕ್ಕಳು ಸಣ್ಣ-ಪುಟ್ಟ ಕೆಲಸಗಳನ್ನು ಮಾಡಿ ನಿರ್ಗತಿಕರಂತೆ ಬದುಕುತ್ತಿದ್ದರೆ, ಮತ್ತೆ ಕೆಲವರು ದುಶ್ಚಟಗಳಿಗೆ ಬಲಿಯಾಗಿ ಜೀವನವನ್ನೇ ಹಾಳುಮಾಡಿಕೊಂಡಿರುವುದನ್ನು ಕೇಳಿ ಬೇಸರವಾಯಿತು. ಹಾಗಾಗಿ ಇವು ಗಳಿಂದ ದೂರವಿರಲು ವಿದ್ಯಾರ್ಥಿ ಅವಧಿ ಯಿಂದಲೇ ಯೋಗ ಶಿಕ್ಷಣವನ್ನು ನೀಡಬೇಕು ಎಂದರು. ಶಿಬಿರಾರ್ಥಿಗಳು ಕಲಿತ ಯೋಗ ಶಿಕ್ಷಣವನ್ನು ತಮ್ಮ ಸಮುದಾಯದವರಿಗೂ ಹೇಳಿ ಕೊಡುವ ಮೂಲಕ ಆರೋಗ್ಯ ಸಮಾಜದ ನಿರ್ಮಾಣ ಮಾಡ ಬೇಕಿದೆ ಎಂದು ಮನವಿ ಮಾಡಿದರು.

ಯೋಗಾಚಾರ್ಯ ನಾರಾಯಣ ಗುರೂಜೀ ಮಾತನಾಡಿ, ಜೂ.21 ಅನ್ನು ವಿಶ್ವ ಯೋಗ ದಿನಾಚರಣೆಯಾಗಿ ಆಚರಿಸು ತ್ತಿದ್ದು, ಪ್ರತಿಯೊಬ್ಬ ಪ್ರಜೆಯು ತಮ್ಮ ದಿನಚರಿಯಲ್ಲಿ ಯೋಗವನ್ನು ಅಳವಡಿಸಿ ಕೊಳ್ಳಬೇಕು. ಯೋಗದಿಂದ ಬದುಕು ಸಾರ್ಥಕವಾಗುತ್ತದೆ. ಸರ್ಕಾರಿ-ಖಾಸಗಿ ಶಾಲೆಗಳಲ್ಲಿ ಯೋಗ ತರಬೇತಿಗಳು ನಡೆಯಬೇಕು ಎಂದರು.

ನಾಲ್ಕು ವಿಭಾಗವಾಗಿ ಯೋಗ ಶಿಬಿರ: ಆ.5ರವರೆಗೆ ನಡೆಯುವ ಯೋಗ ಶಿಬಿರ ವನ್ನು ಪ್ರಾಥಮಿಕ ಪ್ರಶಿಕ್ಷಣ ಶಿಬಿರ, ಯುವ ಪ್ರಶಿಕ್ಷಣ ಶಿಬಿರ, ಮಾತೆಯರ ಪ್ರಶಿಕ್ಷಣ ಶಿಬಿರ ಮತ್ತು ಹಿರಿಯರ ಪ್ರಶಿಕ್ಷಣ ಶಿಬಿರವೆಂದು ನಾಲ್ಕು ಭಾಗವಾಗಿ ವಿಂಗಡಿಸಲಾಗಿದ್ದು, 6 ನೂರಕ್ಕೂ ಹೆಚ್ಚು ಮಂದಿ ಶಿಬಿರದಲ್ಲಿ ಭಾಗವಹಿಸಿದ್ದಾರೆ. ವೇದಿಕೆಯಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿ ಜಿಲ್ಲಾ ಸಂಚಾಲಕ ಕಾಳಾಜಿ, ಜಿಲ್ಲಾ ಸಂಘಟಕ ರವಿಶಂಕರ್, ಜಿಎಲ್‍ಎನ್ ಕಲ್ಯಾಣ ಮಂಟಪದ ಮಾಲೀಕ ದೇವಪ್ರಕಾಶ್ ಇದ್ದರು.