ಮೈಸೂರಲ್ಲಿ ಭಾರತೀಯ ನೌಕಾಪಡೆ ದಿನಾಚರಣೆ

ಮೈಸೂರು,ಡಿ.4(ಪಿಎಂ)-ಮೈಸೂರಿ ನಲ್ಲಿ ಭಾರತೀಯ ಸೇನೆಯ ನೌಕಾಪಡೆಯ ನಿವೃತ್ತ ಯೋಧರು ಶನಿವಾರ `ಭಾರತೀಯ ನೌಕಾಪಡೆ ದಿನ’ ಆಚರಿಸಿದರು.

1971ರಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಯುದ್ಧದ ಸಂದರ್ಭದಲ್ಲಿ ಭಾರತೀಯ ನೌಕಾಪಡೆ `ಆಪರೇಷನ್ ಟ್ರೈಡೆಂಟ್’ ಮೂಲಕ ಪಾಕಿಸ್ತಾನ ಸೇನೆಯನ್ನು ಹಿಮ್ಮೆಟ್ಟಿಸಿತು. ಈ ಕಾರ್ಯಾಚರಣೆ ಪ್ರಾರಂಭ ಮಾಡಿದ ದಿನದ ಸ್ಮರಣೆಗಾಗಿ ಪ್ರತಿ ವರ್ಷ ಡಿ.4ರಂದು ಭಾರತೀಯ ನೌಕಾ ಪಡೆ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ಡಾ.ಎಂ.ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಈ ದಿನಾ ಚರಣೆ ಶುಭ ಕೋರಿದ್ದಾರೆ. ಅಂತೆಯೇ ಮೈಸೂರಿನ ಹುಣಸೂರು ರಸ್ತೆಯ ಖಾಸಗಿ ಹೋಟೆಲ್‍ನಲ್ಲಿ ನೌಕಾಪಡೆಯ ನಿವೃತ್ತ ಯೋಧರು `ಭಾರತೀಯ ನೌಕಾಪಡೆ ದಿನ’ ಆಚರಿಸುವ ಮೂಲಕ ಅಂದಿನ ರೋಚಕ ಕ್ಷಣಗಳನ್ನು ಮೆಲುಕು ಹಾಕಿದರು. `ಆಪರೇಷನ್ ಟ್ರೈಡೆಂಟ್’ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ನೌಕಾಪಡೆಯ ನಿವೃತ್ತ ಯೋಧರಾದ ಸಿ.ಬಿ.ಚೆಂಗಪ್ಪ, ಸಿ.ಆರ್.ಸುರೇಶ್, ಗೋವಿಂದರಾಜುಲು, ಡಿ.ಯು.ಪ್ರಕಾಶ್, ಎಂ.ಎ.ಬೋಪಯ್ಯ ಸೇರಿದಂತೆ ಐವರನ್ನು ಸನ್ಮಾನಿಸಲಾಯಿತು. ಅಲ್ಲದೆ, ಈ ಯುದ್ಧಕ್ಕೂ ಮೊದಲೇ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿರುವ ಅತ್ಯಂತ ಹಿರಿಯ ನಿವೃತ್ತ ಯೋಧ ವಿಕ್ಟರ್ ಪೆರೇರಾ ಅವರನ್ನೂ ಸನ್ಮಾನಿಸಲಾಯಿತು. ಮುಖ್ಯ ಅತಿಥಿ ಯಾಗಿ ಭಾಗವಹಿಸಿದ್ದ ನೌಕಾಪಡೆಯ ನಿವೃತ್ತ ರೇರ್ ಅಡ್ಮಿರಲ್ ನೌಸೇನಾ ಪದಕ ಪುರಸ್ಕøತ ರವಿ ಗಾಯಕ್ವಾಡ್ ಮಾತನಾಡಿ, ಭಾರತೀಯ ನೌಕಾಪಡೆಯು ವಿಶ್ವದ ಅತ್ಯಂತ ಬಲಶಾಲಿ ಪಡೆಗಳಲ್ಲಿ ಒಂದಾ ಗಿದೆ. ಜೊತೆಗೆ ನಮ್ಮ ನೌಕಾಪಡೆಯಲ್ಲಿ ಆಧುನೀಕರಿಸಲಾದ ಯುದ್ಧನೌಕೆಗಳು, ಜಲಾಂತರ್ಗಾಮಿ ನೌಕೆಗಳು ಮತ್ತು ಬಲಶಾಲಿ ಕ್ಷಿಪಣಿಗಳನ್ನು ಹೊಂದಿದೆ. ಈ ಪೈಕಿ ಕೆಲವನ್ನು ದೇಶೀಯವಾಗಿಯೇ ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಭಾರತದ ಕಡಲಿನ ಪ್ರದೇಶಗಳಲ್ಲಿ ಭದ್ರತೆ ಒದಗಿಸುವಲ್ಲಿ ನೌಕಾಪಡೆ ಬದ್ಧತೆಯಿಂದ ಕಾರ್ಯನಿರ್ವಹಿಸುವ ಮೂಲಕ ತನ್ನ ಶೌರ್ಯಕ್ಕೆ ಹೆಸರಾಗಿದೆ ಎಂದು ಹೆಮ್ಮೆಯಿಂದ ನುಡಿದರು.

ನೌಕಾಪಡೆಯ ನಿವೃತ್ತ ಯೋಧರೂ ಆದ ಹಾಸನ ವೈದ್ಯಕೀಯ ಕಾಲೇಜಿನ ಮುಖ್ಯ ಆಡಳಿತಾಧಿಕಾರಿ ಗಿರೀಶ್ ನಂದನ್ ಅತಿಥಿಯಾಗಿ ಪಾಲ್ಗೊಂಡಿದ್ದರು. ಕಾರ್ಯ ಕ್ರಮ ಆಯೋಜನಾ ಸಮಿತಿ ಸದಸ್ಯರೂ ಆದ ನೌಕಾಪಡೆ ನಿವೃತ್ತ ಯೋಧರಾದ ಆರ್.ರಾಜೇಶ್, ಗಜಾನನ ಭಟ್, ಉತ್ತಪ್ಪ, ಸೈಯದ್ ಹೈದರಿ, ಬಿ.ಎಸ್.ಚಂದ್ರಕುಮಾರ್ ಸೇರಿದಂತೆ ನೌಕಾಪಡೆಯ ನಿವೃತ್ತ ಯೋಧರು ಪಾಲ್ಗೊಂಡಿದ್ದರು.