ತೂಗುದೀಪ ಶ್ರೀನಿವಾಸ್ ಭಾವಚಿತ್ರಕ್ಕೆ ಪುಷ್ಪ ನಮನ ವೃತ್ತದಲ್ಲಿ ಪ್ರತಿಮೆ ನಿರ್ಮಾಣಕ್ಕೆ ಒತ್ತಾಯ

ಮೈಸೂರು, ಏ.18(ಆರ್‍ಕೆಬಿ)- ಕನ್ನಡ ಚಿತ್ರರಂಗದ ಹಿರಿಯ ನಟ, ದಿವಂಗತ ತೂಗುದೀಪ ಶ್ರೀನಿವಾಸ್ ಅವರ 81ನೇ ಜನ್ಮ ದಿನಾಚರಣೆ ಅಂಗವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿ ಬಳಗದ ಕಾರ್ಯಕರ್ತರು ಲಲಿತಮಹಲ್ ರಸ್ತೆ ಯಲ್ಲಿರುವ ತೂಗುದೀಪ್ ಶ್ರೀನಿವಾಸ್ ವೃತ್ತದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಸಾರ್ವಜನಿಕರಿಗೆ ಸಿಹಿ ವಿತರಿಸಿದರು.

ಪರಿಸರ ಜಾಗೃತಿ ಸಮಿತಿ ಅಧ್ಯಕ್ಷ ಮಹೇಂದ್ರಸಿಂಗ್ ಕಾಳಪ್ಪ ಮಾತನಾಡಿ, ಕನ್ನಡ ಚಿತ್ರರಂಗ ದಲ್ಲಿ ಖಳನಟರಿಗೂ ಬೇರೆಯದ್ದೇ ಗತ್ತು, ಗಾಂಭೀರ್ಯ ಇದೆ ಎಂಬುದನ್ನು ತೂಗುದೀಪ ಶ್ರೀನಿವಾಸ್ ಅಭಿನಯದ ಮೂಲಕ ತೋರಿಸಿಕೊಟ್ಟಿದ್ದಾರೆ. ಕಲಾವಿದನಿಗೆ ಸಾವಿಲ್ಲ, ದೇಹಕ್ಕೆ ಮಾತ್ರ ಸಾವು ಎಂಬಂತೆ ತೂಗುದೀಪ ಶ್ರೀನಿವಾಸ್ ಅಭಿಮಾನಿಗಳನ್ನು ಅಗಲಿದ್ದರೂ ಇಂದಿಗೂ ಕನ್ನಡ ಪ್ರೇಮಿಗಳ ಮನಸ್ಸಿನಲ್ಲಿ ಅಜರಾಮರವಾಗಿ ಉಳಿದಿದ್ದಾರೆ ಎಂದರು.
ಲಲಿತಮಹಲ್ ರಸ್ತೆಯಲ್ಲಿರುವ ಅವರ ಹೆಸರಿನ ವೃತ್ತದಲ್ಲಿ ಕಂಚಿನ ಪ್ರತಿಮೆ ನಿರ್ಮಾಣ ಮಾಡಿ ಮೇರು ನಟನಿಗೆ ಪಾಲಿಕೆ ಗೌರವ ಸಲ್ಲಿಸಬೇಕು ಎಂದು ಮನವಿ ಮಾಡಿದರು. ಪಾಲಿಕೆ ಮಾಡದಿದ್ದರೆ ಅಭಿಮಾನಿಗಳು ಸ್ವಂತ ಹಣದಿಂದಲೇ ಪ್ರತಿಮೆ ನಿರ್ಮಿಸುವುದಾಗಿ ತಿಳಿಸಿದರು. ಇದೇ ವೇಳೆ ಬಿಜೆಪಿ ನರಸಿಂಹರಾಜ ಕ್ಷೇತ್ರದ ಯುವಮೋರ್ಚಾ ಅಧ್ಯಕ್ಷ ಲೋಹಿತ್, ಹರೀಶ್ ನಾಯ್ಡು, ಸುಚೇಂದ್ರ, ದರ್ಶನ್ ಅಭಿಮಾನಿ ಬಳಗದ ಅಧ್ಯಕ್ಷ ನವೀನ್, ಸಂತೋಷ್, ಎನ್.ರೋಹಿತ್, ವರುಣ್, ಸಂಜಯ್ ಇತರರು ಉಪಸ್ಥಿತರಿದ್ದರು.