ನಾಗವಾಲ ಗ್ರಾಪಂ ವಾರ್ಡ್ ಸಭೆಯಲ್ಲಿ ಮೂಲಭೂತ ಸೌಕರ್ಯಕ್ಕಾಗಿ ಒತ್ತಾಯ

ಮೈಸೂರು, ಫೆ.25- ಮೈಸೂರು ತಾಲೂಕಿನ ಹುಯಿಲಾಳು ಗ್ರಾಮದಲ್ಲಿ ನಾಗವಾಲ ಗ್ರಾಪಂ ವತಿಯಿಂದ ಬುಧವಾರ ವಾರ್ಡ್ ಸಭೆ ನಡೆಯಿತು.

ಈ ವೇಳೆ ಗ್ರಾಪಂ ಅಧ್ಯಕ್ಷ ನರೇಂದ್ರ ಮಾತನಾಡಿ, 5 ವರ್ಷದಲ್ಲಿ ಆಶ್ರಯ ಮನೆ, ಅಂಗನವಾಡಿ ದುರಸ್ತಿಗಾಗಿ ಹಣ ಮಂಜೂರು ಮಾಡಲಾಗುವುದು. ಶಾಲೆಗಳಿಗೆ ಶೌಚಾಲಯ ನಿರ್ಮಾಣ, ವಿಧವಾ ವೇತನ, ಸಂಧ್ಯಾ ಸುರಕ್ಷಾ ಹಾಗೂ ಅಂಗವಿಕಲರ ವೇತನ ಕೊಡಿಸುವುದಾಗಿ ಭರವಸೆ ನೀಡಿದರು.

ಡಿಸಿಸಿ ಕಾರ್ಯದರ್ಶಿ ಹಾಗೂ ಮಾಜಿ ಗ್ರಾಪಂ ಸದಸ್ಯ ಹುಯಿಲಾಳು ರಾಮಸ್ವಾಮಿ ಮಾತನಾಡಿ, ನಮ್ಮ ಗ್ರಾಮ ಮೈಸೂರು ನಗರಕ್ಕೆ ಸಮೀಪವಿದ್ದು, ಗ್ರಾಮದಲ್ಲಿ ಗ್ರಂಥಾಲಯ, ಒಳಚರಂಡಿ ವ್ಯವಸ್ಥೆ, ಸರ್ವೆ ನಂ.189ರಲ್ಲಿ ಸ್ಮಶಾನ ನಿರ್ಮಾಣ, ರಸ್ತೆ ಡಾಂಬರೀಕರಣ, ಕುಡಿಯುವ ನೀರು, ಬೀದಿದೀಪ ಅಳವಡಿಸಿ, ಸ್ವಚ್ಛತೆ ಕಾಪಾಡಿ ಹೆಚ್ಚಿನ ಮೂಲಭೂತ ಸೌಕರ್ಯ ಕಲ್ಪಿಸಬೇಕೆಂದು ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪಿಡಿಓ ಡಾ.ಶೋಭಾರಾಣಿ, ತಾಪಂ ಸದಸ್ಯ ಎಂ.ಮಹದೇವು, ಗ್ರಾಪಂ ಉಪಾಧ್ಯಕ್ಷೆ ಯಶೋಧಮ್ಮ, ಸದಸ್ಯರಾದ ಗೌರಮ್ಮ, ಮಾಲೇಗೌಡ, ರಮೇಶ್, ಲಕ್ಷ್ಮಿ, ಶ್ರೀಧರ್, ಮಮತ, ಶಿವಕುಮಾರ್, ಶೃತಿ, ಗ್ರಾಪಂ ಮಾಜಿ ಸದಸ್ಯರಾದ ಶಿವಣ್ಣ, ಕೇಬಲ್ ಶಿವರಾಮು, ಸೀತಾರಾಮು, ಜಟ್ಟಿಹುಂಡಿ ರಾಚಪ್ಪ ಇನ್ನಿತರರು ಉಪಸ್ಥಿತರಿದ್ದರು.