ಸೋಲಿನ ಕಾರಣ ತಿಳಿಯಲು ಶೀಘ್ರವೇ ಆತ್ಮಾವಲೋಕನ ಸಭೆ

ಮೈತ್ರಿ ಪರಾಜಿತ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಪ್ರತಿಕ್ರಿಯೆ

ಮೈಸೂರು: ಸೋಲಿನ ಸ್ಪಷ್ಟ ಕಾರಣದ ಬಗ್ಗೆ ತಿಳಿಯಲು ಶೀಘ್ರದಲ್ಲಿ ಆತ್ಮಾವಲೋಕನ ಸಭೆ ಕರೆಯಲಾಗುವುದು ಎಂದು ತಿಳಿಸಿದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ -ಜೆಡಿಎಸ್ ಮೈತ್ರಿಯ ಪರಾಜಿತ ಅಭ್ಯರ್ಥಿ ಸಿ.ಹೆಚ್.ವಿಜಯ ಶಂಕರ್, ಈಗಲಾದರೂ ಮಾನಸಿಕವಾಗಿ ಒಂದಾಗಿ ರಾಜ್ಯ ಮೈತ್ರಿ ಸರ್ಕಾರ ಉಳಿಸಿಕೊಳ್ಳಬೇಕು ಎಂದಿದ್ದಾರೆ.

`ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಅವರು, ಮೇಲ್ನೋ ಟಕ್ಕೆ ಕಾಣುವ ಕಾರಣಗಳನ್ನೇ ಮುಂದಿಟ್ಟುಕೊಂಡು ಹೇಳಿಕೆ ನೀಡುವುದು ಸೂಕ್ತವಲ್ಲ. ಎರಡೂ ಪಕ್ಷಗಳ ಕಾರ್ಯ ಕರ್ತರನ್ನು ಒಟ್ಟಿಗೆ ಸೇರಿಸಿ ಮಾತನಾಡಬೇಕು. ತಕ್ಷಣಕ್ಕೆ ಸಿಗುವ ಕಾರಣಗಳ ಆಧಾರದಲ್ಲಿ ಸೋಲಿನ ಹಿನ್ನೆಲೆಯನ್ನು ವಿಶ್ಲೇಷಿಸುವುದು ಸರಿಯಲ್ಲ. ಶೀಘ್ರದಲ್ಲಿ ಆತ್ಮಾವಲೋಕನ ಸಭೆ ಕರೆಯ ಲಾಗುವುದು. ಈ ವೇಳೆ ಎಲ್ಲರ ಹೇಳಿಕೆ ಆಧರಿಸಿ ವರದಿ ಸಿದ್ಧಪಡಿಸಿ ನಮ್ಮ ನಾಯಕರಿಗೆ ಕಳುಹಿಸಲಾಗುವುದು. ಮಾಧ್ಯಮಕ್ಕೆ ಹೇಳಬೇಕಾದ್ದನ್ನು ಹೇಳಲಾಗುವುದು ಎಂದರು.

ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯ ಹಾಗೂ ದೇಶದಲ್ಲಿ ನಡೆದ ಬೆಳವಣಿಗೆಯಲ್ಲಿ ಭಾರೀ ಏರಿಳಿತ ಉಂಟಾಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಒಳ್ಳೆಯ ಬೆಳವಣಿಗೆಯಲ್ಲ. ಆಡಳಿತ ಪಕ್ಷದಂತೆ ವಿರೋಧ ಪಕ್ಷವೂ ಬಲಿಷ್ಠವಾಗಿ ದ್ದರೆ ಮಾತ್ರವೇ ಪ್ರಜಾತಂತ್ರ ವ್ಯವಸ್ಥೆ ಯಶಸ್ಸು ಕಾಣಲು ಸಾಧ್ಯ. ಇಲ್ಲವಾದರೆ ಅದು ಸರ್ವಾಧಿಕಾರಕ್ಕೆ ಎಡೆ ಮಾಡಿಕೊಡಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಹೆಚ್.ಡಿ.ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ, ಮನಿಯಪ್ಪ, ವೀರಪ್ಪ ಮೊಯ್ಲಿ ಅನುಭವಿ ಹಿರಿಯ ರಾಜಕಾರಣಿಗಳು. ಇಂತಹವರು ಲೋಕಸಭೆಯಲ್ಲಿ ಇದ್ದರೆ, ನಾಡು-ನುಡಿ ಹಿತಾಸಕ್ತಿ ಕಾಯಲು ಪೂರಕ ವಾತಾವರಣ ಇರುತ್ತಿತ್ತು. ಆ ಮೂಲಕ ರಾಜ್ಯ ಅಭಿವೃದ್ಧಿಗೆ ಸಹಕಾರಿಯಾಗುತ್ತಿತ್ತು ಎಂದರು. ಮೈತ್ರಿ ಲಾಭ ತಂದುಕೊಡುವ ಬದಲು ಹಾನಿ ಉಂಟು ಮಾಡಿದೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಎರಡು ಜಿಲ್ಲೆಗಳ ಉಸ್ತುವಾರಿ ಸಚಿವರು ಹೇಳಬೇಕು. ಮೇಲ್ನೋಟಕ್ಕೆ ಲೋಕಸಭಾ ಚುನಾವಣಾ ಮೈತ್ರಿಯಲ್ಲಿ ಒಂದಾಗಿರುವಂತೆ ಕಂಡರೂ ಮಾನಸಿಕವಾಗಿ ಹೊಂದಾಣಿಕೆ ಆಗಿಲ್ಲ. ಲಕ್ಷಕ್ಕೂ ಹೆಚ್ಚು ಅಂತರದಲ್ಲಿ ಎದುರಾಳಿ ಗೆಲುವು ಸಾಧಿಸಿರುವುದೇ ಇದಕ್ಕೆ ಸಾಕ್ಷಿ ಎಂದು ವಿಶ್ಲೇಷಿಸಿದ ಅವರು, ಇನ್ನಾದರೂ ಉಭಯ ಪಕ್ಷಗಳ ನಾಯಕರು ಎಚ್ಚರ ವಹಿಸಿ ಮೈತ್ರಿ ಸರ್ಕಾರ ಉಳಿಸಿಕೊಳ್ಳುವತ್ತ ಗಮನ ಕೇಂದ್ರೀಕರಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.